ಮೈಸೂರು(Mysuru): ಪತ್ನಿಯ ಶೀಲದ ಬಗ್ಗೆ ಶಂಕಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪತಿಗೆ ಮೈಸೂರಿನ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿತು.
ಮೈಸೂರು ತಾಲ್ಲೂಕಿನ ರಾಮನಹುಂಡಿ ಗ್ರಾಮದ ರವಿಕುಮಾರ್ ಶಿಕ್ಷೆಗೆ ಗುರಿಯಾದ ಅಪರಾಧಿ.
ಈತ ನಂಜನಗೂಡಿನ ಅಹಲ್ಯ ಗ್ರಾಮದ ನಿವಾಸಿ ಲತಾ ಎಂಬವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಪ್ರಕರಣದ ವಿವರ: ರವಿಕುಮಾರ್ ಮೈಸೂರು ತಾಲ್ಲೂಕು ರಾಮನ ಹುಂಡಿ ಗ್ರಾಮದ ಜವರೇಗೌಡರ ಪುತ್ರ. ನಂಜನಗೂಡು ತಾಲೂಕು ಆಹಲ್ಯ ಗ್ರಾಮದ ಪಾಪೇಗೌಡರ ಮಗಳು ಪುಷ್ಪಲತಾರನ್ನು ವಿವಾಹವಾಗಿದ್ದನು. ಹೆಂಡತಿಯ ಶೀಲದ ಬಗ್ಗೆ ಅನುಮಾನವಿದ್ದು ಪ್ರತಿದಿನ ಕುಡಿದು ಬಂದು ಮಾನಸಿಕ, ದೈಹಿಕ ಹಿಂಸೆ ನೀಡಿ ಹಲ್ಲೆ ನಡೆಸುತ್ತಿದ್ದನಂತೆ. ಇದರಿಂದ ಲತಾ ಮನನೊಂದಿದ್ದರು. ಬಳಿಕ ಪೋಷಕರು ತಮ್ಮ ಊರಿಗೆ ಆಕೆಯನ್ನು ಕರೆದುಕೊಂಡು ಹೋಗಿದ್ದರು.
ಆದರೆ ಅಲ್ಲಿಗೂ ಹೋದ ರವಿಕುಮಾರ್ ಗಲಾಟೆ ಮಾಡಿ ಬಂದಿದ್ದಾನೆ. ತನ್ನ ಪತಿಯ ವಿರುದ್ಧ ಲತಾ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಂದೆ-ತಾಯಿ ಗ್ರಾಮಸ್ಥರು ಸೇರಿಕೊಂಡು ರವಿಕುಮಾರ್ಗೆ ಬುದ್ದಿವಾದ ಹೇಳಿದ್ದು, ರವಿಕುಮಾರ್ ತನ್ನ ಪತ್ನಿಯನ್ನು ರಾಮನಹುಂಡಿ ಗ್ರಾಮದ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ಬೆಳವಣಿಗೆಗಳ ನಂತರವೂ ತನ್ನ ಚಾಳಿ ಬಿಡದ ರವಿ, ಲತಾಳ ಶೀಲದ ಬಗ್ಗೆ ಮತ್ತೆ ಅನುಮಾನ ವ್ಯಕ್ತಪಡಿಸಿ ಹಿಂಸಿಸುತ್ತಿದ್ದ. ಅಂತಿಮವಾಗಿ ತೀವ್ರವಾಗಿ ಮನನೊಂದ ಆಕೆ ಮನೆಯ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದಾಗಿ ರವಿಕುಮಾರ್ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣ ಮೈಸೂರಿನ 5ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ರವಿಕುಮಾರ್ ತನ್ನ ಹೆಂಡತಿಗೆ ಮಾನಸಿಕ ಹಿಂಸೆ ನೀಡಿ ಸಾವಿಗೆ ಪ್ರಚೋದನೆ ನೀಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ತೀರ್ಮಾನಿಸಲಾಗಿತ್ತು.
ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಅಪರಾಧಿಗೆ ರವಿಕುಮಾರ್’ನಿಗೆ ಐಪಿಸಿ ಸೆಕ್ಷನ್ 498(ಎ) ಅಡಿಯಲ್ಲಿ ಅಪರಾಧಕ್ಕೆ ಒಂದು ವರ್ಷ ಶಿಕ್ಷೆ ಮತ್ತು ದಂಡದ ಜೊತೆಗೆ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಅಪರಾಧಕ್ಕೆ 7 ವರ್ಷಗಳ ಶಿಕ್ಷೆಯ ಜೊತೆಗೆ ದಂಡವನ್ನು ನೀಡಿ, ಒಟ್ಟು ನೀಡಿರುವ ಎರಡು ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿದ್ದಾರೆ.