ಮನೆ ರಾಜಕೀಯ ಜೆಡಿಎಸ್ ಪಕ್ಷಕ್ಕೆ ಕ್ರಾಸ್ ವೋಟಿಂಗ್ ಭಯವಿಲ್ಲ, ಕಾಂಗ್ರೆಸ್ ಗೆಲ್ಲಲ್ಲ: ಹೆಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ಪಕ್ಷಕ್ಕೆ ಕ್ರಾಸ್ ವೋಟಿಂಗ್ ಭಯವಿಲ್ಲ, ಕಾಂಗ್ರೆಸ್ ಗೆಲ್ಲಲ್ಲ: ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು (Bengaluru): ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್  ಗೆಲ್ಲಲು ಸಾಧ್ಯವೇ ಇಲ್ಲ. ನಮಗೆ ಕ್ರಾಸ್ ವೋಟಿಂಗ್ ಆತಂಕವೂ ಇಲ್ಲ. ಭಯವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ ನೀಡುವಂತೆ ಕೋರಿ ಜೆಡಿಎಸ್ ಶಾಸಕರಿಗೆ ಪತ್ರ ಬರೆದಿರುವುದು ನಾಚಿಕೆಗೇಡು ಎಂದು ಹರಿಹಾಯ್ದರು.

ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ. ಜೆಡಿಎಸ್ ಪಕ್ಷದ ಎರಡೂ ಕಣ್ಣು ಹೋಗಲಿ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ಕೇವಲ ಬಿಜೆಪಿ ಗೆಲ್ಲಲು ಅನುಕೂಲ ಮಾಡುತ್ತಿದ್ದಾರೆ. ರಾಜ್ಯಸಭೆ ಚುನಾವಣೆ ಬಂದ ಮೇಲೆ ಬಿಜೆಪಿ ಬಿ ಟೀಮ್ ಯಾವುದು ಎನ್ನುವುದು ಅರ್ಥ ಆಗುತ್ತದೆ ಎಂದು ಹೇಳಿದರು.

ನಮ್ಮ ಪಕ್ಷದ 32 ಶಾಸಕರು ನಮ್ಮ ಜತೆಯಲ್ಲೇ ಇದ್ದಾರೆ. ಮುಂದಿನ ಚುನಾವಣೆ ಬರುವವರೆಗೆ ನಮ್ಮ ಶಾಸಕರು ನಮ್ಮ ಜತೆಯೇ ಇರುತ್ತೇವೆಂದು ಹೇಳಿದ್ದಾರೆ. ಬೇರೆ ಪಕ್ಷದವರು ನನ್ನ ಸಂಪರ್ಕದಲ್ಲಿ ಯಾರು ಇಲ್ಲ. ನನ್ನ ಆತ್ಮೀಯರಾದ ಕೆಲ ಕಾಂಗ್ರೆಸ್ ಶಾಸಕರಿಗೆ ನಮಗೆ ಎರಡನೇ ಪ್ರಾಶಸ್ತ್ಯದ ಮತ ನೀಡಲು ಮನವಿ ಮಾಡಿದ್ದೇನೆ ಎಂದರು ಅವರು.

ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಜತೆ ನಾನು ದೂರವಾಣಿಯಲ್ಲಿ ಮಾತಾಡಿದ್ದು ಸತ್ಯ. ಜೆಡಿಎಸ್ ಎರಡನೇ ಪ್ರಾಶಸ್ತ್ಯ ಮತ ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿ ಎಂದು ಮನವಿ ಮಾಡಿಕೊಂಡರು. ನಾವು ಎರಡನೇ ಪ್ರಾಶಸ್ತ್ರ ಮತ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲ್ಲ. ಹೀಗಾಗಿ ನಮ್ಮ ಅಭ್ಯರ್ಥಿಗೆ ನಿಮ್ಮ ಎರಡನೇ ಪ್ರಾಶಸ್ತ್ರ ಮತ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಅವರು ಏನು ಮಾಡ್ತಾರೆ ನೋಡೊಣ ಎಂದರು ಮಾಜಿ ಮುಖ್ಯಮಂತ್ರಿಗಳು.

ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರಿಗೆ ಬರೆದ ಪತ್ರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕುವಂತೆ ಜೆಡಿಎಸ್ ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕು. ನಮ್ಮ ಪಕ್ಷದ ಶಾಸಕರಿಗೆ ಹೇಗೆ ಪತ್ರ ಬರೆಯುತ್ತಾರೆ ಅವರು. ಒಂದು ಕಡೆ ಜೆಡಿಎಸ್ ಪಕ್ಷ  ಬಿಜೆಪಿಯ ಬಿ ಟೀಮ್ ಎಂದು ಟೀಕೆ ಮಾಡಿತ್ತಾರೆ. ಇನ್ನೊಂದು ಕಡೆ ನಮ್ಮದೇ ಶಾಸಕರಿಗೆ ಪತ್ರ ಬರೆದು ಮತ ಕೇಳುತ್ತಾರೆ. ಅವರಿಗೆ ಕೊಂಚವಾದರೂ ನಾಚಿಕೆ ಬೇಡವೇ ಎಂದು ಕಿಡಕಾರಿದರು.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಟವೆಲ್ ಹಾಕಿದ್ದರು. ಆತ್ಮಸಾಕ್ಷಿ ಇದ್ದರೆ ಸತ್ಯ ಹೇಳಲಿ ಈಗ. ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಅಧಿಕಾರ ಸಿಗಲ್ಲ ಎಂದು ಬಿಜೆಪಿ ಸೇರುವುದಕ್ಕೆ ಎಲ್.ಕೆ.ಅಡ್ವಾಣಿ ಅವರೊಂದಿಗೆ ಚೌಕಾಸಿ ಮಾಡಿದ್ದರು. ಅದು ಸುಳ್ಳು ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

2009ರಲ್ಲೇ ಸಿದ್ದರಾಮಯ್ಯ ಆ್ಯಂಡ್ ಟೀಂ ಬಿಜೆಪಿ ಸೇರಲು ಪ್ರಯತ್ನ ಮಾಡಿದ್ದರು. ಎಲ‌್ .ಕೆ. ಅಡ್ವಾಣಿ ಬಳಿ ಚರ್ಚೆ ಮಾಡಿದ್ದರು. ಇದು ಗೊತ್ತಿಲ್ವಾ ಸಿದ್ದರಾಮಯ್ಯನವರೇ? ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವತ್ತು ಸಿದ್ದರಾಮಯ್ಯ ಹೋಗಿದ್ದರು ಎಂದು ಅವರು ಹೇಳಿದರು.

ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎನ್ನುತ್ತಿದ್ದ ವ್ಯಕ್ತಿ ಇದೀಗ ಅದೇ ಪಕ್ಷದ ಶಾಸಕರ ಮತ ಕೇಳುತ್ತಿದ್ದಾರೆ. ಈಗ ಜೆಡಿಎಸ್ ಜಾತ್ಯತೀತ ಪಕ್ಷವಾಯಿತಾ? ಈಗ ಜೆಡಿಎಸ್ ಶಾಸಕರ ಸಂಪರ್ಕ ಬೇಕು, ಮತ ಬೇಕು. 2016ರಲ್ಲಿ ನಮ್ಮ ಶಾಸಕರನ್ನು  ಹೈಜಾಕ್ ಮಾಡಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸಿದ್ದರು. ಇದೇನಾ ನಿನ್ನ ಜಾತ್ಯತೀತ ಸಿದ್ದಾಂತ ಸಿದ್ದರಾಮಯ್ಯನವರೆ? ಡಿ.ಕೆ. ಶಿವಕುಮಾರ್ ಅವರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ನೀವು ಎಷ್ಟು ಬಾರಿ ಜೆಡಿಎಸ್ ಗೆ ಬೆಂಬಲ ಕೊಟ್ಟಿದ್ದೀರಿ. ಧರ್ಮಸಿಂಗ್ ಸಿಎಂ ಆಗಿದ್ದು ಯಾರ ಬೆಂಬಲದಿಂದ? ದೇವೆಗೌಡರು ಪ್ರಧಾನಿ ಆಗಿದ್ದು ಎಲ್ಲ ಮಿತ್ರಪಕ್ಷಗಳ ಬೆಂಬಲದಿಂದ. ಆಗ ನೀವು ಎಲ್ಲಿದ್ದೀರಿ ಸಿದ್ದರಾಮಯ್ಯನವರೇ? ಬೇರೆಯವರ ಬಳಿ ನಿಮ್ಮ ಆಟ ಆಡಿ, ನನ್ನ ಹತ್ತಿರ ಅಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು ಮಾಜಿ ಮುಖ್ಯಮಂತ್ರಿಗಳು.

ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ಸಿನವರಾ? ಹಲವು ಮಿತ್ರ ಪಕ್ಷಗಳು ಸೇರಿ ದೇವೇಗೌಡರನ್ನು ಪ್ರಧಾನಿ ಮಾಡಿದ್ದವು. ಕಾಂಗ್ರೆಸ್ ನಡೆ ಬಗ್ಗೆ ಈಗಲೂ ನಾನು ಬಹಿರಂಗ ಚರ್ಚೆಗೆ ಸಿದ್ಧ. ಚುನಾವಣೆ ನಂತರ ಯಾಕೆ ಈಗಲೇ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.