ಮನೆ ರಾಜ್ಯ ಗೌರ ಗೋಪಾಲದಾಸರ ಕೃತಿಯ ಕನ್ನಡ ಅವತರಣಿಕೆ ʻಮಹಾವಿಸ್ಮಯʼ ಕೃತಿ ಲೋಕಾರ್ಪಣೆ

ಗೌರ ಗೋಪಾಲದಾಸರ ಕೃತಿಯ ಕನ್ನಡ ಅವತರಣಿಕೆ ʻಮಹಾವಿಸ್ಮಯʼ ಕೃತಿ ಲೋಕಾರ್ಪಣೆ

0

ತುಮಕೂರು(Tumkur): ತತ್ವಜ್ಞಾನಿ, ಸಂತ ಗೌರ ಗೋಪಾಲ ದಾಸರು ರಚಿಸಿರುವ ʻLife’s Amazing Secrets’ ಕೃತಿಯ ಕನ್ನಡ ಆವೃತ್ತಿ `ಮಹಾವಿಸ್ಮಯ’ ಕೃತಿಯನ್ನು ಭಾನುವಾರ ತುಮಕೂರಿನಲ್ಲಿ ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ಲೋಕಾರ್ಪಣೆಗೊಳಿಸಿದರು.

`ಸಿಯಾಚಿನ್’, `ಕಾಶ್ಮೀರ್ ಡೈರಿ’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿರುವ ಮೈಸೂರಿನ ಲೇಖಕ ಎಸ್. ಉಮೇಶ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು “ಸಂತ ಗೌರ  ಗೋಪಾಲ ದಾಸರು ತಮ್ಮ ಪ್ರಖರ ಚಿಂತನೆಗಳಿಂದ ಜಗತ್ತಿನಾದ್ಯಂತ ಮನೆಮಾತಾಗಿದ್ದಾರೆ. ಅಂತಹ ಸಂತರ ಕೃತಿಯೊಂದು ಕನ್ನಡದಲ್ಲಿ ಮೂಡಿಬಂದಿರುವುದು ಶ್ಲಾಘನೀಯ” ಎಂದರು.

ಕೃತಿಯನ್ನು ಮೈಸೂರಿನ ಧಾತ್ರಿ ಪ್ರಕಾಶನ ಪ್ರಕಟಿಸಿದೆ. ಪ್ರಕಾಶಕಿ ಶ್ರೀಮತಿ ಬೃಂದಾ ಉಮೇಶ್ ಮಾತನಾಡಿ, “ಈ ಕೃತಿ ಕನ್ನಡ ಸಾರಸ್ವತ ಲೋಕದ ಓದುಗರಿಗೆ ಹೊಸವರ್ಷದಲ್ಲಿ ದಕ್ಕಿರುವ ಕೊಡುಗೆ. ಇದೀಗ ಇದು ನಾಡಿನ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿದೆ” ಎಂದು ತಿಳಿಸಿದ್ದಾರೆ.

ಕೃತಿಯ ಅನುವಾದಕರಾದ ಎಸ್ ಉಮೇಶ್ ಮಾತನಾಡಿ, ಮುಂಬೈ ರಸ್ತೆಯ ಟ್ರ್ಯಾಫಿಕ್‍’ನಲ್ಲಿ ಸಂತ ಗೌರ ಗೋಪಾಲ ದಾಸರು ತಮ್ಮ ಶ್ರೀಮಂತ ಶಿಷ್ಯನೊಂದಿಗೆ ಸಾಗುವಾಗ ನಡೆಸುವ ಸಂಭಾಷಣೆಯೇ ಈ ಕೃತಿಯ ಕಥಾ ಹಂದರ. ಆ ಪಯಣದಲ್ಲಿ ಶ್ರೀಗಳು ಮನುಷ್ಯನ ಮಾನಸಿಕ ಸ್ಥಿತಿ, ಬದುಕಿನ ಪರಮೋಚ್ಛ ಧ್ಯೇಯ, ಸಂತೋಷದ ಕೀಲಿಕೈ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಹತ್ತಾರು ದೃಷ್ಟಾಂತಗಳನ್ನು ಹೇಳುತ್ತಾರೆ. ಮನುಷ್ಯನ ಮಹೋನ್ನತ ಬದುಕಿನ ಅದ್ಭುತ ಚಿತ್ರಣಗಳನ್ನು ನೀಡುತ್ತಾ ಈ ಕೃತಿಯಲ್ಲಿ ಶ್ರೀಗಳು ಓದುಗರ ಕೈಹಿಡಿದು ಜೊತೆಜೊತೆಗೇ ಸಾಗುತ್ತಾರೆ. ಬದುಕಿನ ಆಳ ಮತ್ತು ಅಗಲದ ದಿಗ್ದರ್ಶನ ಮಾಡಿಸುತ್ತಾರೆ. ಒಟ್ಟಾರೆ ಘನ ಉದ್ದೇಶದೊಂದಿಗೆ ಸಮಚಿತ್ತದಿಂದ ಬದುಕುವುದು ಹೇಗೆ? ಎನ್ನುವುದನ್ನು ಸ್ಫೂರ್ತಿದಾಯಕ ಕಥೆಗಳು ಮತ್ತು ದೃಷ್ಠಾಂತಗಳ ಮೂಲಕ ತಿಳಿಸಿಕೊಟ್ಟಿರುವ ಅಮೂಲ್ಯ ಕೃತಿ `ಮಹಾವಿಸ್ಮಯ’ ಎಂದು ಹೇಳಿದ್ದಾರೆ.