ವಾಕ್ ಮತ್ತು ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಅವರ ವಾದವನ್ನು ಪ್ರಮಾಣೀಕೃತ ದುಭಾಷಿಯ ನೆರವಿನಿಂದ ಆಲಿಸುವ ಮೂಲಕ ಕರ್ನಾಟಕ ಹೈಕೋರ್ಟ್ ಸೋಮವಾರ ಇತಿಹಾಸ ಸೃಷ್ಟಿಸಿತು.
ಕೌಟುಂಬಿಕ ವ್ಯಾಜ್ಯ ಪ್ರಕರಣವೊಂದರಲ್ಲಿ ಪ್ರತಿವಾದಿ ಪತ್ನಿ ಪರವಾಗಿ ಸಾರಾ ಸನ್ನಿ ಅವರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದ ಮುಂದೆ ವಾದಿಸಿದರು.
ಸ್ಕಾಟ್ಲೆಂಡ್‌ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವಿನ ಕೌಟುಂಬಿಕ ವ್ಯಾಜ್ಯದ ಭಾಗವಾಗಿ ಪತಿಗೆ ಲುಕ್ ಔಟ್ (ಎಲ್‌ಒಸಿ) ನೋಟಿಸ್ ಜಾರಿಗೊಳಿಸಲಾಗಿತ್ತು. ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣದಲ್ಲಿ ಸಾರಾ ಸನ್ನಿ ಅವರು ಪ್ರತಿವಾದಿಯಾಗಿರುವ ಪತ್ನಿಯ ಪರವಾಗಿ ವಾದಿಸಿದರು.
ಕೆಲ ಕಾಲ ಸಂಜ್ಞೆಗಳ ಮೂಲಕ ವಿಷಯ ಮಂಡಿಸಿದ ಸಾರಾ ವಾದಿಸಿದರು. ಇದಕ್ಕೆ ಪೀಠವು “ಪ್ರತಿವಾದಿ ಪತ್ನಿ ಪರವಾಗಿ ದುಭಾಷಿಯ ನೆರವಿನಿಂದ ಸಾರಾ ಸನ್ನಿ ವಿಸ್ತೃತವಾಗಿ ವಾದಿಸಿದ್ದು, ಇದಕ್ಕೆ ಮೆಚ್ಚುಗೆ ಸೂಚಿಸಬೇಕಿದೆ. ದುಭಾಷಿಯ ನೆರವನಿಂದ ಸಾರಾ ಮಂಡಿಸಿದ ವಾದಕ್ಕೆ ಅಧಿಕೃತವಾಗಿ ಮೆಚ್ಚುಗೆ ಸೂಚಿಸಲಾಗಿದೆ” ಎಂದು ಪೀಠವು ಹೇಳಿತು.
ವಿಚಾರಣೆಯ ಕೊನೆಯ ಹಂತದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜರನಲ್ ಅರವಿಂದ್ ಕಾಮತ್ ಅವರು “ವಾಕ್ ಮತ್ತು ಶ್ರವಣದೋಷವುಳ್ಳ ವಕೀಲೆ ಸಾರಾ ವಾದ ಆಲಿಸುವ ಮೂಲಕ ಕರ್ನಾಟಕ ಹೈಕೋರ್ಟ್ ಇತಿಹಾಸ ಸೃಷ್ಟಿಸಿದ್ದು, ಇಂಥ ವಕೀಲೆಯ ವಾದ ಆಲಿಸಿದ ದೇಶದ ಮೊದಲ ಹೈಕೋರ್ಟ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಸಾರಾ ಅವರು ಸಿಜೆಐ ಮುಂದೆ ವಾದಿಸಿದ್ದರು. ಆದರೆ, ಹೈಕೋರ್ಟ್‌ವೊಂದರಲ್ಲಿ ಇದೇ ಮೊದಲ ಬಾರಿಗೆ ವಾದಿಸಿದ್ದಾರೆ” ಎಂದರು.
ಏಪ್ರಿಲ್ 4ರಂದು ಪೀಠವು ಸಾರಾಗೆ ನೆರವಾಗಲು ಮಾಹಿತಿ ಮತ್ತು ತಂತ್ರಜ್ಞಾನದ ಸಚಿವಾಲಯದ ನೆರವಿನಿಂದ ದುಭಾಷಿ ಸಹಾಯ ಪಡೆಯುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿತ್ತು.
ಈ ಮಧ್ಯೆ, ಎಲ್‌ಒಸಿ ಹಿಂಪಡೆದು ಪತಿಯನ್ನು ವ್ಯಾಪ್ತಿ ಹೊಂದಿದ ಪೊಲೀಸರ ಮುಂದೆ ಹಾಜರುಪಡಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ಆಧರಿಸಿ ಪತಿಯನ್ನು ಪ್ರವಾಸ ಕೈಗೊಳ್ಳಲು ಮ್ಯಾಜಿಸ್ಟ್ರೇಟ್ ಅನುಮತಿಸಿದ್ದರು. ಈ ಹಿನ್ನೆಲೆಯಲ್ಲಿ ದೇಶ ತೊರೆದ ಪತಿಯನ್ನು ಬಂಧಿಸುವಂತೆ ಪತ್ನಿ ಕೋರಿದ್ದರು. ಅಲ್ಲದೇ, ಲುಕ್‌ಔಟ್ ಸುತ್ತೋಲೆ ಹೊರಡಿಸಿದ ವ್ಯಕ್ತಿ ಭಾರತಕ್ಕೆ ಮರಳಿದಾಗ ಅನುಸರಿಸಬೇಕಾದ ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಆಕೆ ಕೋರಿದ್ದರು.
ಪತಿಯ ವಿರುದ್ಧದ ಲುಕ್‌ಔಟ್ ಸುತ್ತೋಲೆ ಹಿಂಪಡೆದಿರುವ ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ಕೇಂದ್ರ ಸರ್ಕಾರವು ಎಲ್‌ಒಸಿ ಸುತ್ತೋಲೆಯು ಕಾರ್ಯಾದೇಶವಾಗಿದ್ದು, ರಾಜ್ಯದ ಎಲ್ಲಾ ಮ್ಯಾಜಿಸ್ಟ್ರೇಟ್‌ಗಳು ಪದೇಪದೇ ಎಲ್‌ಒಸಿ ವಜಾ ಮಾಡುವುದು ಅಥವಾ ಎಲ್‌ಒಸಿ ಹಿಂಪಡೆದು ಪ್ರವಾಸಕ್ಕೆ ಅನುಮತಿಸಿದ್ದಾರೆ ಎಂಬ ಅಂಶಗಳನ್ನು ನ್ಯಾಯಾಲಯದ ಮುಂದಿಟ್ಟಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರ ಪತಿಯ ವಕೀಲರಿಗೆ ನ್ಯಾಯಾಲಯವು ಸೂಚಿಸಿದೆ.
ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳ್ಳದಿದ್ದರೆ ತನಿಖೆಯ ಹೆಸರಿನಲ್ಲಿ ದೂರಿನಲ್ಲಿ ಆರೋಪಿಗಳಾಗಿರುವ ಪತ್ನಿಯ ಅತ್ತೆ-ಮಾವ ಅವರ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು. ಆದರೆ, ಅತ್ತೆ-ಮಾವ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಏಪ್ರಿಲ್ 19ಕ್ಕೆ ಮುಂದೂಡಿದೆ.