ಮನೆ ಅಂತಾರಾಷ್ಟ್ರೀಯ ಬೀಡಿ ಕಟ್ಟುತ್ತಿದ್ದ ಕೇರಳ ಬಾಲಕ ಅಮೆರಿಕದ ಜಡ್ಜ್​!

ಬೀಡಿ ಕಟ್ಟುತ್ತಿದ್ದ ಕೇರಳ ಬಾಲಕ ಅಮೆರಿಕದ ಜಡ್ಜ್​!

0

ಟೆಕ್ಸಾಸ್​: ಕಠಿಣ ಪರಿಶ್ರಮ, ಛಲ ನಿರ್ಧಿಷ್ಟ ಗುರಿಯ ಬೆನ್ನೇರಿ ಹೊರಟರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಡತನವೂ ನಿಮ್ಮ ಸಾಧನೆಗೆ ಮಂಡಿಯೂರುತ್ತದೆ.

ಇದಕ್ಕೆ ತಾಜಾ ಉದಾಹರಣೆ ಕೇರಳ ಮೂಲದ ಸುರೇಂದ್ರನ್​ ಕೆ.ಪಟ್ಟೇಲ್​.

ಇವರು ಬಾಲ್ಯದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತುತ್ತು ಅನ್ನಕ್ಕಾಗಿ ಬೀಡಿ ಕಟ್ಟುತ್ತಾ ಹೋಟೆಲ್​’ನಲ್ಲಿ ಹೌಸ್’​ಕೀಪಿಂಗ್​ ಕೆಲಸ ಮಾಡುತ್ತಲೇ ಓದಿದ ಸುರೇಂದ್ರನ್ ಈಗ ಅಮೆರಿಕದಲ್ಲಿ ಜಡ್ಜ್ ಹುದ್ದೆಗೇರಿದ್ದಾರೆ!

ಜ.1ರಂದು ಟೆಕ್ಸಾಸ್​’ನ ಜಿಲ್ಲಾ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ಸುರೇಂದ್ರನ್​ ಕೆ. ಪಟ್ಟೇಲ್​​ ಅವರು ಕೇರಳದ ​ಕಾಸರಗೋಡು ಮೂಲದವರು. ಇವರ ತಂದೆ-ತಾಯಿ ದಿನಗೂಲಿ ಮಾಡಿ ಬದುಕಿನ ಬಂಡಿದೂಡುತ್ತಿದ್ದರು. ಅಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ್ದರು. ಇವರು ನಡೆದು ಬಂದ ಹಾದಿನ ಕಷ್ಟಗಳೆಂಬ ಮುಳ್ಳಿನ ಹಾಸಿಗೆಯಾಗಿತ್ತು. ಆರ್ಥಿಕ ಸಂಕಷ್ಟದಲ್ಲಿ ಕುಟುಂಬವಿತ್ತು. ಈ ಬಗ್ಗೆ ಅವರೇ ನೆನಪಿಸಿಕೊಂಡಿದ್ದಾರೆ.

ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುರೇಂದ್ರನ್​ ಕೆ.ಪಟ್ಟೇಲ್​​ ಅವರು ತಾನು ಬಾಲ್ಯದಲ್ಲಿ ಬೀಡಿ ಕಟ್ಟುತ್ತಿದ್ದ ಹಾಗೂ ಹೋಟೆಲ್’​ನಲ್ಲಿ ಹೌಸ್​’ಕೀಪರ್​ ಆಗಿ ಕೆಲಸ ಮಾಡುತ್ತಿದ್ದ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಶಿಕ್ಷಣ ಮುಂದುವರಿಸಲಾಗದೆ ಶಿಕ್ಷಣ ಪೂರ್ಣಗೊಳಿಸುವ ಹಂಬಲದಿಂದ ಕಷ್ಟಪಟ್ಟಿದ್ದರಿಂದ ಈಗ ಅಮೆರಿಕದಲ್ಲಿ ಗೌರವಾನ್ವಿತ ಹುದ್ದೆಗೇರುವ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

’10ನೇ ತರಗತಿ ಮುಗಿಸಿದ ಬಳಿಕ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಕುಟುಂಬದ ಆರ್ಥಿಕ ದುಸ್ಥಿತಿ ದೊಡ್ಡ ತಡೆಗೋಡೆಯಂತೆ ಪರಿಣಮಿಸಿತು. ಶಿಕ್ಷಣ ಮುಂದುವರಿಸಲಾಗಿರಲಿಲ್ಲ. ಒಂದು ವರ್ಷ ದಿನಗೂಲಿಯಾಗಿ ಬೀಡಿ ಕಟ್ಟುವ ಕೆಲಸ ಮಾಡಿದ್ದೆ. ಅದು ನನ್ನ ಜೀವನದ ದೃಷ್ಟಿಯನ್ನೇ ಬದಲಾಯಿಸಿತು. ಬಳಿಕ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿದೆ. ನಾನು ಕಾನೂನು ಪದವಿ ಓದುವಾಗ ನನ್ನ ಗೆಳೆಯರೂ ಶಿಕ್ಷಣಕ್ಕೆ ನೆರವಾದರು. ಶಿಕ್ಷಣ ಪಡೆಯುತ್ತಲೇ ಸ್ಥಳೀಯ ಹೋಟೆಲ್​’ನಲ್ಲಿ ಹೌಸ್​ಕೀಪಿಂಗ್​ ಕೆಲಸಕ್ಕೂ ಹೋಗುತ್ತಿದ್ದೆ ಎಂದು ಆ ದಿನಗಳನ್ನು ಸುರೇಂದ್ರನ್​ ಕೆ.ಪಟೇಲ್​ ನೆನಪಿಸಿಕೊಂಡಿದ್ದಾರೆ.

ಕಾನೂನು ಪದವಿ ಮುಗಿದ ನಂತರ ಭಾರತದಲ್ಲಿ ಪಡೆದ ಕಾರ್ಯಾನುಭವ ಅಮೆರಿಕದಲ್ಲಿ ಸಾಧನೆ ಮಾಡಲು ನೆರವಾಯಿತು. ಆದರೆ ಅಮೆರಿಕದಲ್ಲೂ ಕೂಡ ನನ್ನ ಜೀವನ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಇಲ್ಲಿಯೂ ಹಲವು ಅಡೆತಡೆಗಳನ್ನು ಎದುರಿಸಬೇಕಾಯಿತು ಎಂದು ನೆನೆಪಿಸಿಕೊಂಡಿದ್ದಾರೆ.

ಟೆಕ್ಸಾಸ್​’ನಲ್ಲಿ ಜಡ್ಜ್​ ಹುದ್ದೆಗೆ ನಾನು ಪ್ರಯತ್ನಿಸಿದಾಗ ನನ್ನ ಭಾಷಾ ಉಚ್ಛಾರಣೆ (ಆಯಕ್ಸೆಂಟ್​) ಬಗ್ಗೆ ಹಲವರು ಟೀಕಿಸಿದರು. ನನ್ನ ವಿರುದ್ಧ ಅಪಪ್ರಚಾರವನ್ನೂ ಮಾಡಿದರು. ಅಷ್ಟೇ ಅಲ್ಲ, ನಾನು ನ್ಯಾಯಾಧೀಶ ಹುದ್ದೆಗೆ ಪ್ರಯತ್ನಿಸುವುದಾಗಿ ಹೇಳಿದಾಗ ತಮ್ಮದೇ ಡೆಮಾಕ್ರಟಿಕ್​ ಪಕ್ಷವೂ ನಾನು ಗೆಲ್ಲುತ್ತೇನೆಂದು ಭಾವಿಸಿರಲಿಲ್ಲ ಎಂದು ತಮ್ಮ ಪಯಣದ ಹಾದಿಯನ್ನು ಬಿಚ್ಚಿಟ್ಟಿದ್ದಾರೆ.

ನಾನು ಇದನ್ನು ಸಾಧಿಸುತ್ತೇನೆಂದು ಯಾರಿಗೂ ನಂಬಿಕೆಯಿರಲಿಲ್ಲ. ಆದರೆ ಅದನ್ನು ಮೀರಿ ನಾನೀಗ ಈ ಸ್ಥಾನದಲ್ಲಿದ್ದೇನೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ. ನೀವೆ ರೂಪಿಸಿಕೊಳ್ಳಿ. ನಿಮ್ಮ ಭವಿಷ್ಯ ರೂಪಿಸಲು ಬೇರೆಯವರಿಗೆ ಅವಕಾಶ ಕೊಡಬೇಡಿ ಎಂದು ಸಂದೇಶ ರವಾನಿಸಿದ್ದಾರೆ ಸುರೇಂದ್ರನ್​.

1995ರಲ್ಲಿ ಕಾನೂನು ಪದವಿ ಪಡೆದ ಸುರೇಂದ್ರನ್​ ಪಟೇಲ್ ಅವರು 1996ರಲ್ಲಿ ಕೇರಳದ ಹೊಸದುರ್ಗದಲ್ಲಿ ಪ್ರಾಕ್ಟೀಸ್​ ಪ್ರಾರಂಭಿಸಿದರು. ಕ್ರಮೇಣ ಪ್ರಸಿದ್ಧ ವಕೀಲರಾದ ಸುರೇಂದ್ರನ್​ ಪಟೇಲ್, ದಶಕದ ನಂತರ ಸುಪ್ರೀಂ ಕೋರ್ಟ್‌’ನಲ್ಲಿ ಪ್ರಾಕ್ಟೀಸ್​ ಶುರು ಮಾಡಿದರು. ನರ್ಸ್ ಆಗಿದ್ದ ಇವರ ಹೆಂಡತಿಗೆ ಅಮೆರಿಕದ ಪ್ರಮುಖ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಕುಟುಂಬ ಸಮೇತ ಸುರೇಂದ್ರನ್​ ಅವರು ಅಮೆರಿಕಕ್ಕೆ ತೆರಳಿದರು. ಅಲ್ಲಿಯೇ ವಕೀಲಿ ವೃತ್ತಿ ಶುರು ಮಾಡಿದರು. ಅಮೆರಿಕಕ್ಕೆ ತೆರಳಿದ ಎರಡು ವರ್ಷಗಳ ನಂತರ ಟೆಕ್ಸಾಸ್ ಬಾರ್ ಪರೀಕ್ಷೆ ತೆಗೆದುಕೊಂಡ ಸುರೇಂದ್ರನ್​, ಮೊದಲ ಪ್ರಯತ್ನದಲ್ಲೇ ಪಾಸ್​ ಆದರು. ಇದೀಗ ಅಮೆರಿಕದಲ್ಲಿ ಜಡ್ಜ್​ ಆಗಿದ್ದಾರೆ.