ವೈಜ್ಞಾನಿಕ ಅಧ್ಯಯನದಿಂದ ಭವಿಷ್ಯದ ಭೂಮಿಯ ಭೀತಿದಾಯಕ ಚಿತ್ರಣ ಹೊರಬಿದ್ದಿದ್ದು, ಭೂಮಿಯ ಮೇಲಿನ ಜೀವವೈವಿಧ್ಯತೆಗೆ ಇನ್ನೂ ಹೆಚ್ಚು ಕಾಲ ಉಳಿದಿಲ್ಲ ಎಂಬ ಆತಂಕದ ಸಂಗತಿ ಬಹಿರಂಗವಾಗಿದೆ. ನಾಸಾದ ಪ್ಲಾನೆಟರಿ ಮಾಡೆಲಿಂಗ್ ಉಪಕರಣದ ಸಹಾಯದಿಂದ ಜಪಾನಿನ ಟೋಹೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಭೂಮಿಯ ವಾತಾವರಣದಿಂದ ಆಮ್ಲಜನಕವು ಸಂಪೂರ್ಣವಾಗಿ ನಷ್ಠವಾಗಲು ಇನ್ನೂ 1 ಬಿಲಿಯನ್ (ಅಂದರೆ 100 ಕೋಟಿ) ವರ್ಷಗಳು ಮಾತ್ರ ಉಳಿದಿವೆ.
ಈ ಅಧ್ಯಯನವನ್ನು ಮಾಡಲಾಗಿ ವಿಜ್ಞಾನಿಗಳು ಸುಮಾರು 400,000 ಸಿಮ್ಯುಲೇಶನ್‌ಗಳನ್ನು ನಡೆಸಿದ್ದಾರೆ. ಇವು ಭೂಮಿಯ ವಾತಾವರಣದ ಭವಿಷ್ಯದ ಸಂಭಾವ್ಯ ರೂಪಾಂತರಗಳನ್ನು ವಿಶ್ಲೇಷಿಸಿವೆ. ಅಧ್ಯಯನದ ಮೂಲ ಆಶಯವೆಂದರೆ — ಭೂಮಿಯ ಮೇಲೆ ಜೀವ ಉಳಿಯುವ ಕಾಲಾವಧಿ ಎಷ್ಟು ಎಂದು ಅಂದಾಜಿಸುವುದು.
ಅಧ್ಯಯನದ ಪ್ರಕಾರ, ಸೂರ್ಯನು ವಯಸ್ಸಾಗುತ್ತಿದ್ದಂತೆ, ಅದರ ಶಕ್ತಿ ಮತ್ತು ಬೆಳಕು ಹೆಚ್ಚು ತೀವ್ರವಾಗುತ್ತದೆ. ಇದು ಭೂಮಿಯ ಹವಾಮಾನ ವ್ಯವಸ್ಥೆಗೆ ಭಾರೀ ಹೊಡೆತ ನೀಡುತ್ತದೆ. ಮೇಲ್ಮೈ ತಾಪಮಾನ ಗಣನೀಯವಾಗಿ ಹೆಚ್ಚಾಗಿ, ನೀರು ಆವಿಯಾಗಿ ಅಂತರಿಕ್ಷಕ್ಕೆ ನುಗ್ಗುತ್ತದೆ. ಇದರೊಂದಿಗೆ ಕಾರ್ಬನ್ ಚಕ್ರ ದುರ್ಬಲಗೊಳ್ಳುತ್ತದೆ. ಸಸ್ಯಗಳು ಮೃತಪಟ್ಟ ಬಳಿಕ, ಅವುಗಳಿಂದ ಉತ್ಪತ್ತಿಯಾಗುವ ಆಮ್ಲಜನಕವೂ ನಿಂತುಹೋಗುತ್ತದೆ.
ಈ ಪರಿಸ್ಥಿತಿಯಲ್ಲಿ ಭೂಮಿಯ ವಾತಾವರಣವು ಹೆಚ್ಚುವರಿ ಮೀಥೇನ್ ಅಂಶ ಹೊಂದಿದ ಸ್ಥಿತಿಗೆ ಬದಲಾಗುತ್ತದೆ. ಇದು ನಂಬಲಾಗದಷ್ಟು ಆಘಾತಕಾರಿ ದೃಶ್ಯವಾಗಿದೆ, ಏಕೆಂದರೆ ಇದು “ಗ್ರೇಟ್ ಆಕ್ಸಿಡೀಕರಣ ಘಟನೆಯ” ಮೊದಲು ಇದ್ದ ಭೂಮಿಯ ಸ್ಥಿತಿಗೆ ಹೋಲುತ್ತದೆ – ಅಂದರೆ ಯಾವುದೇ ಆಮ್ಲಜನಕವಿಲ್ಲದ, ಕತ್ತಲೆ ಹಾಗೂ ವಿಷಪೂರಿತ ವಾತಾವರಣ!
ನೇಚರ್ ಜಿಯೋಸೈನ್ಸ್ನಲ್ಲಿ ಪ್ರಕಟವಾದ ‘ಭೂಮಿಯ ಆಮ್ಲಜನಕಯುಕ್ತ ವಾತಾವರಣದ ಭವಿಷ್ಯದ ಜೀವಿತಾವಧಿ’ ಎಂಬ ಶೀರ್ಷಿಕೆಯ ಅಧ್ಯಯನವು ಭೂಮಿಯ ಆಮ್ಲಜನಕ ಸಮೃದ್ಧ ವಾತಾವರಣದ ಭವಿಷ್ಯದ ಜೀವಿತಾವಧಿ 1 ಬಿಲಿಯನ್ ವರ್ಷಗಳು ಎಂದು ಕಂಡುಹಿಡಿದಿದೆ.
“ಅನೇಕ ವರ್ಷಗಳಿಂದ, ಸೂರ್ಯನ ಸ್ಥಿರ ಪ್ರಕಾಶಮಾನತೆ ಮತ್ತು ಜಾಗತಿಕ ಕಾರ್ಬೊನೇಟ್-ಸಿಲಿಕೇಟ್ ಭೂರಾಸಾಯನಿಕ ಚಕ್ರದ ಬಗ್ಗೆ ವೈಜ್ಞಾನಿಕ ಜ್ಞಾನದ ಆಧಾರದ ಮೇಲೆ ಭೂಮಿಯ ಜೀವಗೋಳದ ಜೀವಿತಾವಧಿಯನ್ನು ಚರ್ಚಿಸಲಾಗಿದೆ” ಎಂದು ಜಪಾನ್ನ ಟೋಕಿಯೊದ ಟೋಹೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕಜುಮಿ ಒಜಾಕಿ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಸದ್ಯಕ್ಕೆ ಈ ಸಮಯವಾಹಿನಿ ನಮ್ಮನ್ನು ನೇರವಾಗಿ ಬೆದರಿಸುವಂತಹದಾಗಿಲ್ಲವೆಂದು ಕೆಲವರು ಅಭಿಪ್ರಾಯಪಟ್ಟರೂ, ಇದು ಭೂಮಿಯ ದೀರ್ಘಕಾಲೀನ ಭವಿಷ್ಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಮಹತ್ತರ ಅಧ್ಯಯನವಾಗಿದೆ. ಇದು ವಿಜ್ಞಾನ, ಜಲವಾಯು ಬದಲಾವಣೆ ಮತ್ತು ಜೀವ ವಿಜ್ಞಾನಗಳ ಸಂಯೋಜಿತ ಚಿಂತನೆಗೆ ದಾರಿ ಮಾಡಿಕೊಡುತ್ತದೆ.














