ಕೊಪ್ಪಳ: ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವಿದ್ಯುತ್ ಬಿಲ್ ವಸೂಲಿಗೆ ಬಂದ ಲೈನ್ಮ್ಯಾನ್ ಮೇಲೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.
ಚಂದ್ರಶೇಖರ್ ಹಿರೇಮಠ ಅವರದ್ದು ಆರು ತಿಂಗಳ 9990 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇತ್ತು. ಈ ಹಿನ್ನಲೆಯಲ್ಲಿ ಬಾಕಿ ತುಂಬುವಂತೆ ಹೇಳಲು ಮಂಜುನಾಥ್, ಚಂದ್ರಶೇಖರ್ ಅವರ ಮನೆಗೆ ಹೋಗಿದ್ದ. ಈ ವೇಳೆ ಚಂದ್ರಶೇಖರ್ ನಾನು ಬಾಕಿ ತುಂಬಲ್ಲ ಎಂದಿದ್ದಾನೆ. ಅದೆಲ್ಲ ಆಗಲ್ಲ ಬಾಕಿ ತುಂಬಲೇಬೇಕೆಂದು ಲೈನಮ್ಯಾನ್ ಮಂಜುನಾಥ ಹೇಳಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಏಕಾಏಕಿ ಚಂದ್ರಶೇಖರ್ ಲೈನ್ ಮ್ಯಾನ್ ಮಂಜುನಾಥನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ.
ಮಂಜುನಾಥ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಹಲ್ಲೆ ನಡೆಸಿದ ಚಂದ್ರಶೇಖರಯ್ಯ ವಿರುದ್ಧ ಮಂಜುನಾಥ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಆರೋಪಿ ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಜೆಸ್ಕಾಂ ಸಿಬ್ಬಂದಿ ಆಗ್ರಹಿಸಿದ್ದಾರೆ.