ಬೆಳಗಾವಿ: ದೇಶದ ಜನತೆಗೆ ಮೋದಿ ಎಷ್ಟು ಗ್ಯಾರಂಟಿಗಳನ್ನು ನೀಡಿದ್ದಾರೆಂಬ ಪಟ್ಟಿ ಬಿಡುಗಡೆಗೊಳಿಸಬೇಕು ಎಂದು ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಎಷ್ಟು ಗ್ಯಾರಂಟಿಗಳನ್ನು ನೀಡಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಟೀಕಿಸಿದ ಪ್ರಧಾನಿ ಮೋದಿ ಅವರು ಚುನಾವಣೆ ಗೆಲುವಿಗಾಗಿ ಪ್ರಚಾರ ಸಭೆಯಲ್ಲಿ ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಆದರೆ ಜನತೆಗೆ ಎಷ್ಟು ಗ್ಯಾರಂಟಿಗಳನ್ನು ನೀಡಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಲಿ ಎಂದು ಆಗ್ರಹಿಸಿದರು.
ಜನಕ್ಕೆ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡುತ್ತಿದ್ದೇವೆ. ಕಾರಣ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಬಿಜೆಪಿಯವರ ಆರೋಪ ಸುಳ್ಳು ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಅಣ್ಣಾಸಾಬ್ ಜೊಲ್ಲೆ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ನಾವು ಚುನಾವಣೆ ಬಂದಾಗ ಅಷ್ಟೇ ಚುನಾವಣೆ ಮಾಡುವುದಿಲ್ಲ. ನಿರಂತರವಾಗಿ ಜನರೊಂದಿಗೆ ಇರುತ್ತೇವೆ. ವಾರಕ್ಕೊಮ್ಮೆ ಭೇಟಿ ನೀಡಿ ಕಾರ್ಯಕರ್ತರಿಗೆ ಸ್ಪಂದಿಸುತ್ತೇವೆ ಎಂದರು.
ಸದ್ಯಕ್ಕೆ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಗೆಲ್ಲುತ್ತಾರೆ ಎಂದು ಮಾತ್ರ ಹೇಳಬಹುದು, ಆದರೆ ಇಷ್ಟೇ ಅಂತರದಿಂದ ಗೆಲ್ಲುತ್ತಾರೆ ಎಂದು ಈಗಲೇ ಹೇಳಲು ಆಗುವುದಿಲ್ಲ ಎಂದರು.