ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಲೈನ್ ಮ್ಯಾನ್’ ಚಿತ್ರ ಮಾರ್ಚ್ 15ರಂದು ತೆರೆಕಾಣಬೇಕಿತ್ತು. ಆದರೆ, ಈಗ ಬಿಡುಗಡೆ ಒಂದು ವಾರ ಮುಂದೆ ಹೋಗಿದ್ದು, ಮಾ.22ರಂದು ತೆರೆಕಾಣುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಎರಡು ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಿತು.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಘು ಶಾಸ್ತ್ರಿ, “ಇದು ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ತುಂಬಾ ಜನರಿಗೆ ಲಾಕ್ ಡೌನ್ ಸಾಕಷ್ಟು ಅನುಭವ ನೀಡಿದೆ. ನಾವು ಬೇಕಾಗಿರುವುದಕ್ಕಿಂತ ಬೇಡದಿರುವುದಕ್ಕೆ ಹೆಚ್ಚು ತಲೆ ಕೆಡಿಸಿಕೊಂಡಿದ್ದೇವೆ ಎಂದು ಲಾಕ್ ಡೌನ್‌ನಲ್ಲಿ ನನಗನಿಸಿದ್ದು. ಕರೆಂಟ್ ಹೋದಾಗ ಕೆ.ಇ.ಬಿ ಅವರಿಗೆ ಫೋನ್ ಮಾಡುತ್ತೇವೆ ಹೊರತು, ಮನೆಯಲ್ಲಿ ಅಜ್ಜಿ ಇದ್ದರೆ ಕಥೆ ಕೇಳುವ ಮನಸ್ಸು ಮಾಡಲ್ಲ. ಭಾವನೆಗಳಿಗೆ ಸ್ಪಂದಿಸುವುದು ಇತ್ತೀಚಿಗೆ ಬಹಳ ಕಡಿಮೆಯಾಗಿದೆ. ಇಂತಹ ಸಾಕಷ್ಟು ಅಂಶಗಳನ್ನಿಟ್ಟುಕೊಂಡು ಲೈನ್ ಮ್ಯಾನ್ ಕಥೆ ಹೆಣಿದಿದ್ದೇನೆ. ಆ ಕಥೆ ನಿರ್ಮಾಪಕರಿಗೆ ಇಷ್ಟವಾಯಿತು. ಪರ್ಪಲ್ ರಾಕ್ ಸಂಸ್ಥೆಯವರು ಚಿತ್ರ ನಿರ್ಮಾಣಕ್ಕೆ ಮುಂದಾದರು. ನನ್ನ ಊರಾದ ಚಾಮರಾಜನಗರದ ಚಂದಕವಾಡಿಯಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಚಿತ್ರ ಇತ್ತೀಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ’ ಎಂದರು.
“ನಮ್ಮ ಪರ್ಪಲ್ ರಾಕ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೂರನೇ ಚಿತ್ರವಿದು. ಯತೀಶ್ ವೆಂಕಟೇಶ್, ಶ್ರೀನಿವಾಸ್ ಬಿಂಡಿಗನವಿಲೆ, ಅಜಯ್ ಅಪರೂಪ್ ಹಾಗೂ ನಾನು ಈ ಚಿತ್ರದ ನಿರ್ಮಾಪಕರು. ತೆಲುಗಿನಲ್ಲಿ ಜನಪ್ರಿಯರಾಗಿರುವ ತ್ರಿಗುಣ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಉಳಿದಂತೆ ಕಾಜಲ್ ಕುಂದರ್, ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಕಮಲ ಹಾಗೂ ಅಂಜಲಿ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ’ ಎಂದು ನಿರ್ಮಾಪಕರಲ್ಲೊಬ್ಬರಾದ ಗಣೇಶ್ ಪಾಪಣ್ಣ ತಿಳಿಸಿದ್ದಾರೆ.
ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮೂರು ಹಾಡು ಗಳಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.