‘ರಿಯಲ್ ಸ್ಟಾರ್’ ಉಪೇಂದ್ರ ಅವರು ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರಜಾಕೀಯದ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಅವರು ಸಿನಿಮಾಗಳ ಕಡೆಗೂ ಗಮನ ಹರಿಸಿದ್ದಾರೆ.
ಉಪೇಂದ್ರ ನಟಿಸಿರುವ ‘ಬುದ್ಧಿವಂತ 2’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸೆಪ್ಟೆಂಬರ್ 15ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಪೋಸ್ಟರ್ಗಳ ಮೂಲಕ ಗಮನ ಸೆಳೆದಿರುವ ‘ಬುದ್ಧಿವಂತ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಉಪೇಂದ್ರ ಅವರಿಗೆ ಜೋಡಿಯಾಗಿ ಸೋನಾಲ್ ಮಾಂಥರೋ ಮತ್ತು ಮೇಘನಾ ರಾಜ್ ನಟಿಸಿದ್ದಾರೆ.
‘ಬುದ್ಧಿವಂತ 2’ ಸಿನಿಮಾ ಬಹಳ ಹಿಂದೆಯೇ ಅನೌನ್ಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ದಿನಾಂಕ ವಿಳಂಬ ಆಗಿತ್ತು.
ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ‘ಬುದ್ಧಿವಂತ 2’ ಸಿನಿಮಾದ ರಿಲೀಸ್ ದಿನಾಂಕವನ್ನು ತಿಳಿಸಲಾಗಿದೆ.
ಸೆಪ್ಟೆಂಬರ್ 18ರಂದು ಅವರ ಹುಟ್ಟುಹಬ್ಬ ಇದೆ. ಪ್ರತಿ ವರ್ಷ ಈ ದಿನವನ್ನು ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಉಪ್ಪಿ ಬರ್ತ್ ಡೇ ಬಹಳ ವಿಶೇಷವಾಗಿ ಆಗಲಿದೆ. ‘ಬುದ್ಧಿವಂತ 2’ ಸಿನಿಮಾದ ಜೊತೆಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಸೆಲೆಬ್ರೇಟ್ ಮಾಡಲಿದ್ದಾರೆ.
ಜೈದೇವ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಗುರುಕಿರಣ್ ಅವರು ಸಂಗೀತ ನೀಡಿದ್ದು, ಎಸ್. ನವೀನ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ. ಪ್ರಕಾಶ್ ಅವರು ಸಂಕಲನ ಮಾಡಿದ್ದಾರೆ. ರವಿವರ್ಮ, ವಿಕ್ರಮ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗೆ ಇದೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ಡಾ. ಟಿ.ಆರ್. ಚಂದ್ರಶೇಖರ್ ಅವರು ‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್ ಮೂಲಕ ‘ಬುದ್ಧಿವಂತ 2’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಒಂದು ವಿಶೇಷವಾದ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ.