ಮನೆ ಕ್ರೀಡೆ ನೂತನ ಮಾದರಿಯಲ್ಲಿ ಮುಂದಿನ ಟಿ20 ವಿಶ್ವಕಪ್

ನೂತನ ಮಾದರಿಯಲ್ಲಿ ಮುಂದಿನ ಟಿ20 ವಿಶ್ವಕಪ್

0

ನವದೆಹಲಿ: 2024ರಲ್ಲಿ ನಡೆಯುವ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯು ಹೊಸ ಮಾದರಿಯಲ್ಲಿ ನಡೆಯಲಿದೆ.

ಈ ಟೂರ್ನಿಯು 20 ತಂಡಗಳನ್ನು ಒಳಗೊಂಡಿರಲಿದ್ದು, 5 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಮೊದಲ ಸುತ್ತಿನ ಪಂದ್ಯಗಳು ಮುಗಿದ ಬಳಿಕ ಸೂಪರ್ 8 ಮಾದರಿಯಲ್ಲಿ ಸ್ಪರ್ಧೆ ನಡೆಸಲಾಗುತ್ತದೆ.

2021 ಮತ್ತು 2022ರ ಆವೃತ್ತಿಗಳಲ್ಲಿ ಮೊದಲ ಸುತ್ತಿನ ಪಂದ್ಯಗಳ ಬಳಿಕ ಸೂಪರ್ 12 ಹಂತ ಆಡಿಸಲಾಗಿತ್ತು. ಆದರೆ ಮುಂಬರುವ ಆವೃತ್ತಿಯಲ್ಲಿ ಪ್ರತಿ ನಾಲ್ಕು ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸಲಿವೆ. ಮತ್ತೆ ಅವುಗಳನ್ನು ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ.

ಈ ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದ್ದು, ಆ ಬಳಿಕ ಫೈನಲ್ ನಡೆಯಲಿದೆ. ವೆಸ್ಟ್ ಇಂಡೀಸ್‌ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಆಡಲು ಈಗಾಗಲೇ 12 ತಂಡಗಳು ಸ್ಥಾನ ಪಡೆದಿವೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಕೊನೆಗೊಂಡ ಟಿ20 ವಿಶ್ವಕಪ್‌’ನಲ್ಲಿ ಚಾಂಪಿಯನ್ ಆದ ಇಂಗ್ಲೆಂಡ್‌ ಮತ್ತು ರನ್ನರ್ಸ್‌ ಅಪ್ ಪಾಕಿಸ್ತಾನ ಸೇರಿದಂತೆ ಎಂಟು ತಂಡಗಳು ಅರ್ಹತೆ ಪಡೆದಿವೆ.

ರ‍್ಯಾಂಕಿಂಗ್ ಆಧಾರದಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳೂ ಅರ್ಹತೆ ಗಿಟ್ಟಿಸಿವೆ. ಆತಿಥೇಯ ದೇಶಗಳಾಗಿ ವೆಸ್ಟ್ ಇಂಡೀಸ್‌, ಅಮೆರಿಕ ಸ್ಥಾನ ಪಡೆದಿವೆ.