ಮೈಸೂರು: ಆಷಾಢ ಮಾಸದ ಮೂರನೇ ಶುಭ ಶುಕ್ರವಾರ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆಯಲು ಭಕ್ತ ಸಾಗರವೇ ಚಾಮುಂಡಿ ಬೆಟ್ಟಕ್ಕೆ ಹರಿದು ಬಂದಿತು.
ಚಾಮುಂಡೇಶ್ವರಿಯ ಮೂಲ ಮೂರ್ತಿಗೆ ಲಕ್ಷ್ಮಿ ಅಲಂಕಾರ ಮಾಡಿದ್ದರೆ, ಉತ್ಸವಮೂರ್ತಿಗೆ ಗಜಲಕ್ಷ್ಮಿ ಅಲಂಕಾರದೊಂದಿಗೆ ಆನೆಯ ಮೇಲೆ ಕೂರಿಸಿದಂತೆ ಅಲಂಕರಿಸಿದ್ದು ವಿಶೇಷ. ಬೆಳಗ್ಗಿನ ಜಾವದಿಂದಲೇ ಭಕ್ತರು ಭಕ್ತಿಭಾವದಿಂದ ತಾಯಿಯ ದರ್ಶನ ಪಡೆದುಕೊಂಡರು. ಹಾಲಿ ಸಚಿವರು, ಮಾಜಿ ಮುಖ್ಯಮಂತ್ರಿ ಸೇರಿ ಅನೇಕ ಗಣ್ಯರು ಆಗಮಿಸಿ ದರ್ಶನ ಪಡೆದರು. ಬೆಳಗ್ಗೆ ೫ ಗಂಟೆಯಿಂದ ರಾತ್ರಿ ೧೦ ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಗಜಲಕ್ಷ್ಮೀ ಅಲಂಕಾರ (ಮಹಾಲಕ್ಷ್ಮೀ ಅಲಂಕಾರ): ಚಾಮುಂಡೇಶ್ವರಿಯ ಮೂಲಮೂರ್ತಿ ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷ ಗಜಲಕ್ಷ್ಮಿ ಅಲಂಕಾರ ಮಾಡಲಾಗಿದೆ. ಆನೆಯ ಮೇಲೆ ತಾಯಿ ಆಸೀನರಾಗಿರುವುದು ಗಜಲಕ್ಷ್ಮಿ ಅಲಂಕಾರ. ಇದನ್ನು ಮಹಾಲಕ್ಷ್ಮಿ ಅಲಂಕಾರ ಎಂದೂ ಕರೆಯುತ್ತಾರೆ ಎಂದು ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಬೆ.೩.೩೦ಕ್ಕೆ ದೇವಾಲಯದ ಒಳಭಾಗದಲ್ಲಿ ಅಭಿಷೇಕ, ಅರ್ಚನೆ ಹಾಗೂ ಅಲಂಕಾರದ ಬಳಿಕ ಮಹಾಮಂಗಳಾರತಿ ಮಾಡಲಾಯಿತು. ಬಳಿಕ ಭಕ್ತರಿಗೆ ತಾಯಿಯ ದರ್ಶನಕ್ಕೆ ಅವಕಾಶ ನೀಡಲಾಯಿತು. ದೇವಾಲಯದ ಒಳಭಾಗದಲ್ಲಿ ಕಮಲದ ಹೂವು ಹಾಗೂ ಹಣ್ಣುಗಳಿಂದ ಮಾಡಿದ ವಿಶೇಷ ಅಲಂಕಾರ ಭಕ್ತರ ಗಮನ ಸೆಳೆಯಿತು. ದೇವಿಯ ದರ್ಶನ ಪಡೆದ ಗಣ್ಯರು: ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್,? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಸಂಸದರೂ ಆದ ವಿ.ವೈ.ರಾಘವೇಂದ್ರ ಕುಟುಂಬ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದರು. ಶಾಸಕ ಎಚ್.ಡಿ.ರೇವಣ್ಣ ಪುತ್ರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸತತ ಮೂರನೇ ವಾರವೂ ಬೆಟ್ಟಕ್ಕೆ ಆಗಮಿಸಿ, ದರ್ಶನ ಪಡೆದರು. ಶಾಸಕರಾದ ಎ.ಮಂಜು, ಜಿ.ಟಿ.ದೇವೇಗೌಡ ಸೇರಿ ಅನೇಕರು ತಾಯಿಯ ದರ್ಶನ ಪಡೆದುಕೊಂಡರು.















