ಮನೆ ಕಾನೂನು ಸುಪ್ರೀಂ ಕೋರ್ಟ್ ವಿಚಾರಣೆಗೂ ಮುನ್ನವೇ ಲಕ್ಷದ್ವೀಪ ಸಂಸದನ ಸದಸ್ಯತ್ವ ಮರುಸ್ಥಾಪಿಸಿದ ಲೋಕಸಭಾ ಕಾರ್ಯಾಲಯ

ಸುಪ್ರೀಂ ಕೋರ್ಟ್ ವಿಚಾರಣೆಗೂ ಮುನ್ನವೇ ಲಕ್ಷದ್ವೀಪ ಸಂಸದನ ಸದಸ್ಯತ್ವ ಮರುಸ್ಥಾಪಿಸಿದ ಲೋಕಸಭಾ ಕಾರ್ಯಾಲಯ

0

ಕೊಲೆ ಪ್ರಕರಣವೊಂದರಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ಕೇರಳ ಹೈಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಲಕ್ಷದ್ವೀಪ ಸಂಸದ ಪಿ ಪಿ ಮೊಹಮ್ಮದ್ ಫೈಜಲ್ ಅವರ ಸಂಸತ್ ಸದಸ್ಯತ್ವವನ್ನು ಲೋಕಸಭಾ ಕಾರ್ಯಾಲಯ ಬುಧವಾರ ಮರುಸ್ಥಾಪಿಸಿದೆ.

ಕುತೂಹಲಕಾರಿ ಸಂಗತಿ ಎಂದರೆ ಸುಪ್ರೀಂ ಕೋರ್ಟ್ ಈ ಸಂಬಂಧ ವಿಚಾರಣೆ ನಡೆಸುವ ಕೆಲ ಹೊತ್ತಿನ ಮೊದಲು ಫೈಜಲ್ ಅವರ ಸದಸ್ಯತ್ವವನ್ನು ಕಾರ್ಯಾಲಯ ಮರುಸ್ಥಾಪಿಸಿತು. ತನ್ನ ವಿರುದ್ಧ ಶಿಕ್ಷೆ ರದ್ದಾಗಿದ್ದರೂ ತಮ್ಮ ಸಂಸತ್ ಸದಸ್ಯತ್ವವನ್ನು ಪುನರ್ಸ್ಥಾಪಿಸಿಲ್ಲ ಎಂದು ಫೈಜಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಕೊಲೆ ಯತ್ನ ಪ್ರಕರಣದಲ್ಲಿ ಸಂಸದರಿಗೆ ವಿಧಿಸಿದ್ದ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಜನವರಿ 25ರಂದು ರದ್ದುಗೊಳಿಸಿತ್ತು. ಇದನ್ನು ಕಾರ್ಯಾಲಯ ಬುಧವಾರ ಹೊರಡಿಸಿರುವ ಅಧಿಸೂಚನೆ ಪರಿಗಣಿಸಿದೆ. ಪರಿಣಾಮ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8ರೊಂದಿಗೆ ಸಹವಾಚನ ಮಾಡಲಾದ ಸಂವಿಧಾನದ 102 (1) (ಇ) ವಿಧಿಯಡಿ ಲೋಕಸಭೆಯಿಂದ ಅಮಾನತುಗೊಳಿಸದ್ದ ಆದೇಶ ರದ್ದುಗೊಂಡಿದೆ.

ಕೇಂದ್ರ ಸರ್ಕಾರದ ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಪಿ ಎಂ ಸಯೀದ್ ಅವರ ಅಳಿಯ ಪಡನಾಥ್ ಸಾಲಿಹ್ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಸಂಸದ ಫೈಜಲ್ ಸೇರಿದಂತೆ ನಾಲ್ವರನ್ನು ದೋಷಿಗಳೆಂದು ಜನವರಿ 11ರಂದು, ಕವರಟ್ಟಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ತೀರ್ಪನ್ನು ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್ ನೀಡಿದ್ದ ತೀರ್ಪಿಗೆ ಪೂರಕವಾಗಿಯೇ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದಿತ್ತು. ಆದರೂ ಸದಸ್ಯತ್ವ ಮರುಸ್ಥಾಪಿಸಿಲ್ಲ ಎಂದು ಫೈಜಲ್ ಸುಪ್ರೀಂ ಕೋರ್ಟ್ ಕದತಟ್ಟಿದ್ದರು.

ಹಿಂದಿನ ಲೇಖನಕಾಂಗ್ರೆಸ್​ ರಾಜ್ಯದ ಜನರನ್ನು ಭಿಕ್ಷುಕರಂತೆ ಕಾಣುತ್ತಿದೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಬಸಳೆ ಸೊಪ್ಪು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಇದರಿಂದ ದುಬಾರಿ ಲಾಭ..