ಮನೆ ರಾಜ್ಯ ಕರುನಾಡ ಜೀವನದಿ ಕಾವೇರಿ ನದಿ ವಿಷಜಲ

ಕರುನಾಡ ಜೀವನದಿ ಕಾವೇರಿ ನದಿ ವಿಷಜಲ

0

ಮಡಿಕೇರಿ : ಕರುನಾಡ ಜೀವನದಿ ಎಂದೇ ಜನಮಾನಸದಲ್ಲಿ ಬೇರೂರಿರುವ, ತಮಿಳುನಾಡಿನ ರೈತರಿಗೂ ಸಂಜೀವಿನಿಯಾಗಿರುವ ಕಾವೇರಿ ನದಿಗೆ ಒಡಲಲ್ಲೇ ಕಂಟಕ ಎದುರಾಗಿದೆ. ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಜನಿಸೋ ಈ ಜೀವದಾತೆ ಕರುನಾಡ ಜನರ ಪಾಲಿಗೆ ವರಪ್ರದಾಯಿನಿವಾಗಿದೆ.

ಕೇವಲ ಕುಡಿಯೋಕೆ ಮಾತ್ರವಲ್ಲದೇ ಕೃಷಿಗೂ ನೀರು ಹರಿಸುವ ಮೂಲಕ ರೈತರ ಪಾಲಿಗೆ ಕಾವೇರಿ ದೇವತೆಯಾಗಿದ್ದಾಳೆ. ಕಾವೇರಿ ನದಿಯ ಮಹತ್ವ ಬೆಂಗಳೂರಿಗರಿಗೆ ಚೆನ್ನಾಗಿ ಗೊತ್ತಿದೆ. ರಾಜಧಾನಿಯ ಜನರಿಗೆ ಬಹುತೇಕ ಸಪ್ಲೈ ಆಗೋದು ಇದೇ ಕಾವೇರಿ ನದಿಯ ನೀರೇ. ಹೀಗೆ ಕೋಟ್ಯಂತರ ಜನರ ಪಾಲಿನ ಸಂಜೀವಿನಿಯಾಗಿರೋ ಕಾವೇರಿ ನದಿ ತನ್ನ ಒಡಲಲ್ಲೇ ಕಲುಷಿತವಾಗುತ್ತಿದ್ದಾಳೆ.

ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಪಲ್ಪರ್ ನಡೆಯುತ್ತಿದ್ದು, ಅದರಿಂದ ಬರುವ ತ್ಯಾಜ್ಯವನ್ನ ನೇರವಾಗಿ ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಇನ್ನೂ ಕೆಲವರು ನದಿ ಅಂಚಿನಲ್ಲಿ ರೆಸ್ಟೋರೆಂಟ್, ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಾಣ ಮಾಡಿಕೊಂಡು ನೇರವಾಗಿ ಕೊಳಚೆ ನೀರನ್ನು ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಹೀಗಾಗಿ ಕಾವೇರಿ ದಿನನಿತ್ಯ ಕಲುಷಿತವಾಗುತ್ತಿದ್ದಾಳೆ. ಅಲ್ಲದೇ ಅಯ್ಯಪ್ಪ ಮಾಲಾಧಾರಿಗಳು ಈ ನದಿಯಲ್ಲಿ ಸ್ನಾನ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

ಕೆಲವು ಕಾಫಿ ತೋಟದ ಮಾಲೀಕರು, ರೆಸಾರ್ಟ್ ಮಾಲೀಕರು ಪ್ರಭಾವಿಗಳಾಗಿರುವುದರಿಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಸ್ಥಳೀಯ ಗ್ರಾಮ ಪಂಚಾಯ್ತಿಯವರು ಮೀನಾಮೇಷ ಎಣಿಸುತ್ತಿದ್ದಾರೆ ಅನ್ನೋ ಆರೋಪ ಕೂಡ ಇದೆ. ಹೀಗೆ ರಾಜಾರೋಷವಾಗಿ ಕಲುಷಿತ ನೀರು ಕಾವೇರಿ ನದಿಯನ್ನ ಸೇರುತ್ತಿದ್ದರೂ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣ ಕುರುಡರಾಗಿ ಏನೂ ಗೊತ್ತಿಲ್ಲದಂತೆ ಮೂಕ ಪ್ರೇಕ್ಷಕರಾಗಿದ್ದಾರೆ.

ಈ ಬಗ್ಗೆ ಸ್ಥಳೀಯ ಜನರು ದೂರುಗಳ ಸುರಿಮಳೆಗೈದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೇವಲ ಕಾಫಿ ಪಲ್ಪರ್ ನೀರು ಮಾತ್ರವಲ್ಲದೇ ಇಡೀ ಗ್ರಾಮದ ಶೌಚಾಲಯದ ನೀರು ಕೂಡ ಕಾವೇರಿ ನದಿಗೆ ಸೇರುತ್ತಿದ್ದು, ಪರಿಶುದ್ಧವಾಗಿರೋ ಕಾವೇರಿ ನದಿ ನೀರು ಇದರಿಂದ ಕಲುಷಿತವಾಗುತ್ತಿದೆ.

ಒಂದು ಕಡೆ ಕಾಫಿ ಪಲ್ಪರ್ ನೀರು, ಮತ್ತೊಂದೆಡೆ ಶೌಚಾಲಯದ ನೀರು, ಇದರ ಜೊತೆಗೆ ಪ್ಲಾಸ್ಟಿಕ್ ಸೇರಿದಂತೆ ಕೆಲ ವಿಷತ್ಯಾಜ್ಯಗಳು ನದಿಯ ಒಡಲನ್ನು ನಿರಂತರವಾಗಿ ಸೇರುತ್ತಲೇ ಇದೆ. ಈ ಬಗ್ಗೆ ಗಮನ ವಹಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಕೊಡಗು ಜಿಲ್ಲೆ ಸೇರಿದಂತೆ ಮಂಡ್ಯ ರಾಮನಗರ ಹಾಸನ ಭಾಗದ ವಿವಿಧ ಸಂಘಟನೆಗಳು ಕಾವೇರಿ ನದಿಯ ಉಳಿವಿಗಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.