ಮನೆ ರಾಜ್ಯ ಮೇಲಧಿಕಾರಿಗಳ ಆಜ್ಞೆ ಮೇರೆಗೆ ಶಾಂತಿಯುತ ಮತದಾನಕ್ಕೆ ಸಿದ್ಧತೆ ಮಾಡಿಕೊಂಡ ಪೊಲೀಸ್ ಪಡೆ

ಮೇಲಧಿಕಾರಿಗಳ ಆಜ್ಞೆ ಮೇರೆಗೆ ಶಾಂತಿಯುತ ಮತದಾನಕ್ಕೆ ಸಿದ್ಧತೆ ಮಾಡಿಕೊಂಡ ಪೊಲೀಸ್ ಪಡೆ

0

ಉರಿ ಬಿಸಿಲಿನಲ್ಲೂ ಕರ್ತವ್ಯದಲ್ಲಿ ನಿರತರಾದ ಖಾಕಿ ಪಡೆಗೆ ಒಂದು ಪ್ಯಾಕೇಟ್ ಊಟ, ಬಾಟಲ್ ನೀರು. ತಮ್ಮ ಮೇಲಧಿಕಾರಿಗಳ ಆಜ್ಞೆ ಅಣತಿಯಂತೆ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡ ಪೊಲೀಸ್ ಪಡೆ.

ಚಿತ್ರದುರ್ಗ: 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಖಾಕಿ ಪಡೆ ಹೈರಾಣಗಿದ್ದು, ಉರಿ ಬಿಸಿಲಿನ ನಡುವೆಯು ಗಣ್ಯರನ್ನು ಕಾಯುವ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಇಅವರಿಗೆ ಸವಾಲಾಗಿದ್ದು, ಹಾಗೂ ಬಿಡುವಿಲ್ಲದೇ ಕೆಲಸ ಮಾಡುವುದು ಈಗ ಪೊಲೀಸರ ಪಾಲಾಗಿದೆ.

ಪ್ರತಿ ದಿನ ಬೆಳಗಾದ್ರೆ ಕೇಂದ್ರ, ರಾಜ್ಯ ಸಚಿವರು ತಾಲೂಕು, ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಅವರ ರಕ್ಷಣೆಯೆ ಪೊಲೀಸರಿಗೆ ಸವಾಲ್ ಆಗಿ ಬಿಟ್ಟಿದೆ. ಇದರ ಜತೆ ಚುನಾವಣೆಯ ಪ್ರಚಾರಕ್ಕೆ ಆಗಮಿಸುವ ಅಭ್ಯರ್ಥಿ, ವಿಐಪಿ ಹಾಗೂ ಸ್ಟಾರ್ ಪ್ರಚಾರಕರಿಗೆ ಬಂದೋಬಸ್ತ್ ನೀಡಿ, ಮೇಲಧಿಕಾರಿಗಳಿಂದಲೂ ಹಾಗೂ ಸಾರ್ವಜನಿಕರಿಂದಲೂ ಸೈ ಎನಿಸಿಕೊಳ್ಳಲು ಪ್ರತಿ ದಿನವೂ ಹೆಣಗುತ್ತಿರುತ್ತಾರೆ. ಇವುಗಳ ಮಧ್ಯೆ ಅಪಘಾತ, ಆಕಸ್ಮಿಕ ಸಾವು, ಗುಂಪು ಗಲಾಟೆ, ಹಲ್ಲೆ, ಜಾತ್ರೆ, ಹಬ್ಬ ಹರಿದಿನಗಳಿಗೆ ಸೂಕ್ತ ರಕ್ಷಣೆ ಒದಗಿಸುವುದು ಇವರ ಹೊಣೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬೆಳ್ಳಂ, ಬೆಳ್ಳಗ್ಗೆಯೇ ತಿಂಡಿ ತಿನ್ನದೇ ರೆಡಿಯಾಗುವ ಪೊಲೀಸಪ್ಪನಿಗೆ ಸದ್ಯಕ್ಕೆ ಕರ್ತವ್ಯವೇ ದೇವರಾಗಿದೆ. ತನ್ನ ಮೇಲಧಿಕಾರಿಗಳ ಆಜ್ಞೆ ಮೇರೆಗೆ ಬಿಸಿಲಿನಲ್ಲಿ ಡ್ಯೂಟಿ ಮಾಡುವ ಪೊಲೀಸರು ಚುನಾವಣಾ ಸಮಯದಲ್ಲಿ ಒತ್ತಡಕ್ಕೆ ಒಳಗಾಗಿ, ಅನೇಕ ಕಾಯಿಲೆಗಳನ್ನು ತಂದುಕೊಳ್ಳುತ್ತಿದ್ದಾರೆ.

ದಿನದ ಎಲ್ಲಾ ಸಮಯದಲ್ಲಿಯೂ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು, ಈಗ ಸುಡುಬಿಸಿಲಿನಲ್ಲಿಯೇ ಚುನಾವಣೆಯ ಕರ್ತವ್ಯಕ್ಕೆ ಹೈರಾಣಾಗುತ್ತಿದ್ದಾರೆ. ಚುನಾವಣೆ ಕಾವು ಏರುತ್ತಿದ್ದಂತೆ ಪೊಲೀಸರ ಕರ್ತವ್ಯದ ಬಿಸಿಯೂ ಹೆಚ್ಚಾಗುವುದು ಸಾಮಾನ್ಯ ಸಂಗತಿಯಾದರೂ, ತಮ್ಮ ಹೆಂಡತಿ, ಮಕ್ಕಳು ಹಾಗೂ ಮನೆಯವರ ಜೊತೆಯೂ ಕಾಲ ಕಳೆಯಲು ಸಮಯದ ಅಭಾವು ಉದ್ಭವಿಸಿ ಕರ್ತವ್ಯದ ಕರೆಗೆ ಓಗೊಟ್ಟು ಊರೂರು ಅಲೆಬೇಕಾಗಿದೆ.

ಚುನಾವಣೆ ಯಶಸ್ವಿಯಾಗಲು ಪ್ರಮುಖ ಪಾತ್ರ
ಕ್ಷೇತ್ರ ವ್ಯಾಪ್ತಿಯಲ್ಲಿ 2,43,727 ಮತದಾರರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಿದ್ದಾರೆ. ಇವರ ನಿರ್ಭಯ ಮತದಾನಕ್ಕೆ, ಗುಂಪು, ಗಲಾಟೆಗಳನ್ನು ಹತ್ತಿಕ್ಕಲು, ಚುನಾವಣೆಯನ್ನು ಯಶಸ್ವಿಯಾಗಿಸಲು ಪ್ರಮುಖ ಪಾತ್ರವಹಿಸುವ ಪೋಲೀಸ್ ಸಿಬ್ಬಂದಿಗಳು ಚುನಾವಣೆ ಪೂರ್ವ ಹಾಗೂ ನಂತರದಲ್ಲಿಯೂ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ. ಇನ್ನಿತರ ಅನೇಕ ಹೇಳಲಾರದ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ನಿಭಾಯಿಸುವುದು ಅನೇಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿ ಉಗುಳಲಾದರೆ, ನುಂಗಲಾರದೆ ತೊಳಲಾಡುತ್ತಿದ್ದಾನೆ ಖಾಕಿ.

ಒಟ್ಟಿನಲ್ಲಿ ಹೆಚ್ಚು ಜನರು ಸೇರುವ ಎಲ್ಲಾ ಚಟುವಟಿಕೆಗಳಲ್ಲಿಯೂ ಗಾಳಿ, ಮಳೆ, ಬಿಸಿಲನ್ನೂ ಲೆಕ್ಕಿಸದೆ ಪ್ರಧಾನ ಪಾತ್ರ ನಿಭಾಯಿಸುವ ಪೊಲೀಸರು ತಮ್ಮ ಕುಟುಂಬದ ಸಮಸ್ಯೆಗಳನ್ನು ಬದಿಗಿಟ್ಟು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವ ಇವರ ಸೇವೆಗೆ ಎಲ್ಲರೂ ಸಲ್ಯೂಟ್ ಹೊಡೆಯಲೇಬೇಕಿದೆ.