ಮೈಸೂರು: ರಾಜಕಾರಣವನ್ನು ಉದ್ಯೋಗ ಮಾಡಿಕೊಳ್ಳುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದು ಆರೋಗ್ಯಕರ ಸಮಾಜದ ನಿರ್ಮಾಣದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆತಂಕ ವ್ಯಕ್ತಪಡಿಸಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ವತಿಯಿಂದ ನಗರದ ರುಚಿ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಸೋಮವಾರ ಏರ್ಪಡಿಸಿದ್ದ ನೇಗಿಲಯೋಗಿ ಉದ್ಯಮಿ ಹಾಗೂ ವೃತ್ತಿಪರರ ಸಮ್ಮಿಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಮತ್ತು ರಾಜಕಾರಣವನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕಾದ ಅವಶ್ಯಕತೆ ಇದೆ. ರಾಜಕಾರಣಿಗಳು ಜೀವನೋಪಾಯಕ್ಕೆ ಒಂದು ಉದ್ಯೋಗವನ್ನು ಆಶ್ರಯಿಸಿ ಇದರಿಂದ ಪ್ರತ್ಯೇಕವಾಗಿ ರಾಜಕಾರಣ ಮಾಡುವುದನ್ನು ಒಂದು ಸೇವೆಯನ್ನಾಗಿ ರೂಢಿ ಮಾಡಿಕೊಳ್ಳಬೇಕು. ಆದರೆ ಬಹಳಷ್ಟು ಜನರು ರಾಜಕಾರಣವನ್ನೇ ತಮ್ಮ ಉದ್ಯೋಗ ವನ್ನಾಗಿ ಮಾಡಿಕೊಂಡು ಅದನ್ನೇ ತಮ್ಮ ಸಂಪಾದನೆಯ ಮಾರ್ಗವನ್ನಾಗಿಸಿಕೊಂಡು ಅಮಾಯಕರನ್ನು ಶೋಷಿಸುತ್ತಾ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರಲ್ಲಿ ರಾಜಕಾರಣಿಗಳ ಬಗ್ಗೆ ಅಸಹನೆಯ ಭಾವನೆ ಹೆಚ್ಚಾಗುತ್ತಿದೆ ಎಂದು ಅವರು ವಿಷಾಧಿಸಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಮಾಜದ ಬಾಂಧವರ ಕಲ್ಯಾಣಕ್ಕಾಗಿ ಹಾಗೂ ಸಾಮರಸ್ಯ ಸಮುದಾಯದ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಿಸುತ್ತಿದೆ. ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಅವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ಮೂಲಕ ಸಮಾಜದ ಎಲ್ಲ ವರ್ಗಗಳ ಜನರಿಗೆ ಸೇವೆ ನೀಡುತ್ತಿದೆ. ಮೈಸೂರು ಮಾತ್ರವಲ್ಲದೆ ಮಂಡ್ಯ ಬೆಂಗಳೂರು ರಾಮನಗರ ಹಾಸನ ಮತ್ತಿತರ ಜಿಲ್ಲೆಗಳಲ್ಲಿಯೂ ಶಾಖೆಗಳನ್ನು ತೆರೆಯುವ ಮೂಲಕ ಸಮುದಾಯದ ಒಳಿತಿಗೆ ಶ್ರಮಿಸುತ್ತಿದೆ. ಹಿಂದಿನಿಂದಲೂ ಸಂಸ್ಥೆಯ ಎಲ್ಲಾ ಉತ್ತಮ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬರಲಾಗುತ್ತಿದ್ದು ಮುಂದಿನ ದಿನಗಳಲ್ಲಿಯೂ ಸಂಸ್ಥೆ ಹಮ್ಮಿಕೊಳ್ಳುವ ಎಲ್ಲಾ ರಚನಾತ್ಮಕ ಕಾರ್ಯಗಳಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಮಾತನಾಡಿ ನಮ್ಮ ಸಮುದಾಯದ ಯುವಕರು ಸರ್ಕಾರದ ನೌಕರಿಗಾಗಿ ಕಾಯ್ದು ಕುಳಿತುಕೊಳ್ಳದೆ ತಮ್ಮನ್ನು ವೈವಿಧ್ಯಮಯ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬೇಕು. ಉದ್ಯೋಗ ಪಡೆಯಲು ಹಪಹಪಿಸುವ ಬದಲಿಗೆ ಹತ್ತಾರು ಜನರಿಗೆ ಉದ್ಯೋಗದಾತರಾಗಿ ಸಮಾಜದ ಪ್ರಗತಿಗೆ ಕೈಜೋಡಿಸಬೇಕು. ಒಂದೇ ಬಗೆಯ ಉದ್ಯಮವನ್ನು ಎಲ್ಲರೂ ಸ್ಥಾಪಿಸುವ ಬದಲಾಗಿ ಭಿನ್ನ-ಭಿನ್ನ ಉದ್ಯಮಗಳನ್ನು ಆರಂಭಿಸಬೇಕು. ಈ ನಿಟ್ಟಿನಲ್ಲಿ ಮುಂದೆ ಬರುವ ಯುವಕರಿಗೆ ಎಲ್ಲ ಬಗೆಯ ನೆರವನ್ನು ಒದಗಿಸುವ ಮೂಲಕ ಯುವಕರ ಶಕ್ತಿ ಸಾಮರ್ಥ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ನಮ್ಮ ಸಮುದಾಯ ಹೆಚ್ಚು ಗಮನ ನೀಡಬೇಕು ಎಂದರು. ನೇಗಿಲಯೋಗಿ ಅಧ್ಯಕ್ಷರಾದ ಡಿ.ರವಿಕುಮಾರ್ ಪ್ರಾಸ್ತಾವಿಕ ನುಡಿಗಳಾಡಿ ನಮ್ಮ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಶಿಕ್ಷಣ ಉದ್ಯೋಗ ತರಬೇತಿ ಮತ್ತಿತರ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯ ಮೂಲಕ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದು, ನಮ್ಮ ಈ ಕಾರ್ಯಕ್ಕೆ ಅನೇಕ ಮಹನೀಯರು ದಾನಿಗಳು ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರೆಲ್ಲರಿಗೂ ಸಂಸ್ಥೆ ಆಭಾರಿಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಎಫ್ ಪಿ ಓ ಗಳ ಸ್ಥಾಪನೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ಆಯೋಜಿಸಿರುವ ಉದ್ದಿಮೆ ಮತ್ತು ವೃತ್ತಿಪರರ ಸಮ್ಮಿಲನದ ಮೂಲಕ ಜೀವಿಗಳ ನಡುವೆ ಸಂಪರ್ಕ ಸೇತುಗಾಗಿ ಸಂಸ್ಥೆ ಕಾರ್ಯನಿರ್ವಹಿಸಲಿದೆ. ಸಮುದಾಯದ ಯುವ ಜನರ ಅನುಕೂಲಕ್ಕಾಗಿ ಹೆಚ್ಚಿನ ಸಹಕಾರ ನೀಡಬೇಕೆಂದು ಅವರು ಕೋರಿದರು. ಸಂಸ್ಥೆಯ ಟ್ರಷ್ಟಿ ಇಂಜಿನಿಯರ್ ಇಂದ್ರೇಶ್ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳಿಗೆ ಕಾರ್ಯಕ್ರಮದ ವಿವರಗಳನ್ನು ಪರಿಚಯಿಸಿದರು.
ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಪಿ ವಿಶ್ವನಾಥ್, ಮೈಸೂರು ಮೂಡ ಮಾಜಿ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ ,ಕೆ ಎ ಎಸ್ ಎಸ್ ಎಫ್ ಐ ಜಂಟಿ ನಿರ್ದೇಶಕ ಸತೀಶ್ ,ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಮಂಜೇಗೌಡ ,ಗಂಗಾಧರ ಗೌಡ , ಡಾ.ಮೀನಾಕುಮಾರಿ ,ಡಾ. ಎಸ್ ಯಶಸ್ವಿನಿ , ಮಂಜುನಾಥ್ , ನಿಂಗರಾಜು , ಶಿವಶಂಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಂಡ್ಯ, ರಾಮನಗರ ,ಬೆಂಗಳೂರು ,ಪಾಂಡವಪುರ , ಚನ್ನಪಟ್ಟಣ , ಕನಕಪುರ ,ಮಾಗಡಿ ,ಕೃಷ್ಣರಾಜಪೇಟೆ ಮತ್ತಿತರ ಸ್ಥಳಗಳಿಂದ ಉದ್ಯಮಿಗಳು ಆಗಮಿಸಿದ್ದರು ಸಾಹಿತಿ ಡಾ ಬಲ್ಲೇನಹಳ್ಳಿ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶೋಭ ರಮೇಶ್ ವಂದಿಸಿದರು .