ಬೆಂಗಳೂರು: ಬರ ಘೋಷಣೆಯನ್ನೇ ತಡ ಮಾಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿ ಮೂರು ತಿಂಗಳು ತಡವಾಗಿ ಬರ ಘೋಷಣೆ ಮಾಡಿದೆ. ಈಗ ಹಿಂಗಾರು ಬರಗಾಲದ ಘೋಷಣೆಯನ್ನೂ ಮಾಡಿಲ್ಲ ಎಂದು ವಿಧಾನಸಭೆಯ ಪ್ರತಿಪ್ಷಕ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬರಗಾಲದ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದರು. ಈ ಕುರಿತು ಪತ್ರಿಕೆಗಳಲ್ಲೂ ಅನೇಕ ವರದಿಗಳು ಬಂದಿವೆ. ಆದರೆ ಬರವನ್ನು ಘೋಷಣೆ ಮಾಡಲು ಸರ್ಕಾರ ಮೂರು ತಿಂಗಳು ತೆಗೆದುಕೊಂಡಿದೆ. ಮಾಧ್ಯಮಗಳಲ್ಲಿ ವರದಿ ಬಂದಾಗ, ರೈತರು ಪ್ರತಿಭಟಿಸಿದಾಗಲೇ ಬರಗಾಲ ಘೋಷಿಸಿದ್ದರೆ ಕೇಂದ್ರ ಸರ್ಕಾರದ ತಂಡ ಬೇಗ ಬಂದು ಪರಿಶೀಲನೆ ಮಾಡುತ್ತಿತ್ತು. ಬರ ಘೋಷಣೆಯನ್ನೇ ತಡ ಮಾಡಿ ಈಗ ಕೇಂದ್ರದ ತಪ್ಪು ಎನ್ನುವ ರಾಜ್ಯ ಸರ್ಕಾರಕ್ಕೆ ಮಾನ ಇಲ್ಲ ಎಂದು ದೂರಿದರು.
ಸಚಿವ ಕೃಷ್ಣ ಬೈರೇಗೌಡರು ಅಷ್ಟೊಂದು ಪ್ರತಿಭಾವಂತರಾಗಿದ್ದರೆ ಸಂಸದರಾಗಿ ಅವರೇ ಹೋಗಿ ಪ್ರಶ್ನೆ ಕೇಳಬಹುದಿತ್ತು. ಒಬ್ಬ ರೈತರಿಗೆ 25 ಸಾವಿರ ರೂ. ನೀಡುವ ಬದಲು ಕೇವಲ 2 ಸಾವಿರ ರೂ. ನೀಡಿದ್ದೇವೆ ಎನ್ನುತ್ತಿದ್ದಾರೆ. ಅದರಲ್ಲೂ ಮೋಸ ಮಾಡಲಾಗಿದೆ. ಮತ್ತೆ ಹೊಸ ತಂತ್ರಜ್ಞಾನವೆಂದು ಅದನ್ನೂ ತಡ ಮಾಡಲಾಗಿದೆ. ಕೇಂದ್ರ ಸರ್ಕಾರದ ಹಣದಲ್ಲಿ ಬಾಕಿ ಉಳಿಸಿಕೊಂಡು ಅದೇ ಹಣವನ್ನು ನೀಡಲಾಗುತ್ತಿದೆ. ನಂತರ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಕೇರಳ ಸರ್ಕಾರದಂತೆ ಸುಪ್ರೀಂ ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಳ್ಳುವುದಷ್ಟೇ ಬಾಕಿ ಉಳಿದಿದೆ. ಅಲ್ಲಿನ ಸರ್ಕಾರ ದಿವಾಳಿಯಾದಂತೆ ಇಲ್ಲೂ ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
900 ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಿಎಂ ಸಿದ್ದರಾಮಯ್ಯ ಅವರಿಗೆ ಕರುಣೆ ಇಲ್ಲ. ಒಂದು ವರ್ಷದಲ್ಲೇ ಫ್ರೀ ಫ್ರೀ ಎಂದು ಅಭಿವೃದ್ಧಿಗೆ ಹಣ ಇಲ್ಲ. ಒಂದು ರಸ್ತೆ, ತಾಲೂಕು ಆಸ್ಪತ್ರೆ, ಶಾಲೆ ಯಾವುದನ್ನೂ ಕಟ್ಟಿಸಿಲ್ಲ. ರಸ್ತೆಗಳನ್ನು ನೋಡಿದರೆ ಒಂದು ದೇಶದ ಆರ್ಥಿಕ ಸ್ಥಿತಿ ಹೇಗಿದೆ ಎಂದು ತಿಳಿಯುತ್ತದೆ ಎಂಬ ಮಾತಿದೆ. ಆದರೆ ರಾಜ್ಯ ಸರ್ಕಾರ ಯಾವ ರಸ್ತೆ ನಿರ್ಮಿಸಿದೆ? ಸಚಿವ ಅಮಿತ್ ಶಾ ಸರಿಯಾಗಿಯೇ ಹೇಳಿದ್ದು, ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡುವುದೇ ಸೂಕ್ತ ಎಂದರು.
ಮೋದಿ ಸರ್ಕಾರದಿಂದ ದಾಖಲೆ ಪರಿಹಾರ
ಈ ಹಿಂದಿನ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಪರಿಹಾರ ನೀಡಲು 9, 11 ತಿಂಗಳು ಕಾಲ ತೆಗೆದುಕೊಂಡಿದ್ದರು. ನನ್ನ ತೆರಿಗೆ ನನ್ನ ಹಕ್ಕು ಎಂದು ಹೇಳಿ 15 ಲಕ್ಷ ರೂಪಾಯಿಯನ್ನು ಕೇರಳಕ್ಕೆ ಕೊಟ್ಟಿದ್ದಾರೆ. ತೆರಿಗೆ ಪಾಲಿನಲ್ಲಿ 2004-2014 ರ ಅವಧಿಯಲ್ಲಿ UPA 81,795 ಕೋಟಿ ರೂ. ರಾಜ್ಯಕ್ಕೆ ನೀಡಿದ್ದು, 2014-2024 ರ ಅವಧಿಯಲ್ಲಿ ಮೋದಿ ಸರ್ಕಾರ 2,82,791 ಕೋಟಿ ರೂ. ನೀಡಿದೆ. ಅಂದರೆ ಈ ಪ್ರಮಾಣ 242% ಕ್ಕೂ ಅಧಿಕವಾಗಿದೆ. 2004-2014 ಅವಧಿಯಲ್ಲಿ UPA 60,779.84 ಕೋಟಿ ರೂ. ಅನುದಾನವನ್ನು ರಾಜ್ಯಕ್ಕೆ ನೀಡಿದ್ದು, 2014-2024 ರ ಅವಧಿಯಲ್ಲಿ ಮೋದಿ ಸರ್ಕಾರ 2,08,832.02 ಕೋಟಿ ರೂ. ನೀಡಿದೆ. ಅಂದರೆ ಅನುದಾನದ ಪ್ರಮಾಣ 243.58% ಅಧಿಕವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಪ್ರಕಾರ, ಪ್ರಕೃತಿ ವಿಕೋಪಕ್ಕೆ ಶಾಶ್ವತ ನಿಧಿಯಾಗಿ 5 ಸಾವಿರ ಕೋಟಿ ರೂ. ಎಂದು ತಿಳಿಸಿದ್ದರು. ಅದನ್ನು ಇನ್ನೂ ನೀಡಿಲ್ಲ ಎಂದು ದೂರಿದರು.
ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, 2024 ರ ಮಧ್ಯಂತರ ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು ಸತತ ನಾಲ್ಕನೇ ವರ್ಷವೂ ಶೇ.11.1 ರಷ್ಟು ಹೆಚ್ಚಿಸಿದೆ. ಇದರಿಂದ ಬಂಡವಾಳ ವೆಚ್ಚ 11.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಇದು ದೇಶದ ಜಿಡಿಪಿಯ ಶೇ.3.4 ರಷ್ಟು ಆಗಿದೆ. 2023-24 ರಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ 3.27 ಲಕ್ಷ ಕೋಟಿ ರೂ. ಗೂ ದೊಡ್ಡದು. ಜೊತೆಗೆ ಕಳೆದ ವರ್ಷಕ್ಕಿಂತ ಸುಮಾರು 25 ಸಾವಿರ ಕೋಟಿ ರೂ. ಹೆಚ್ಚಿನ ಸಾಲ ಕೂಡ ಮಾಡಲಾಗಿದೆ. ಆದರೆ ಬಂಡವಾಳ ವೆಚ್ಚಕ್ಕೆ ಮೀಸಲಿಟ್ಟಿದ್ದು ಕೇವಲ 55,000 ಕೋಟಿ ರೂ. ಅಂದರೆ ಬಂಡವಾಳ ವೆಚ್ಚ ಹೆಚ್ಚಳವಾಗಿದ್ದು ಕೇವಲ 1.85% ಎಂದು ವಿವರಿಸಿದರು.
ಅನ್ನಭಾಗ್ಯಕ್ಕೆ ಕನ್ನ ಹಾಕಬೇಡಿ
ಅನ್ನಭಾಗ್ಯವನ್ನು ಮೋದಿ ಸರ್ಕಾರ ನೀಡುತ್ತಿದ್ದು, ಅದಕ್ಕೂ ಕನ್ನ ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಸಿಎಂ ಸಿದ್ದರಾಮಯ್ಯ ಕೇವಲ ಕನ್ನಭಾಗ್ಯ ನೀಡುತ್ತಿದೆ. ಬಿಜೆಪಿ ಸರ್ಕಾರ ಕೇವಲ ಒಂದು ತಿಂಗಳೊಳಗೆ ಪ್ರವಾಹ ಹಾನಿ ಪರಿಹಾರ ನೀಡಿದಂತೆ ಈಗಿನ ಸರ್ಕಾರ ಕೂಡ ಬರ ಪರಿಹಾರ ನೀಡಬೇಕಿತ್ತು. ನಿಮ್ಮ ಬಳಿ ಹಣ ಇದೆ ಎಂದರೆ ಕೂಡಲೇ ರೈತರಿಗೆ ಪರಿಹಾರ ಬಿಡುಗಡೆ ಮಾಡಿ ಎಂದು ಆರ್.ಅಶೋಕ ಆಗ್ರಹಿಸಿದರು.
ಹಣಕಾಸು ಸಚಿವರನ್ನು ಸಂತೆ ಭಾಷಣ ಮಾಡಲು ಕರೆಯುವುದಲ್ಲ. ಸಂಸತ್ತಿಗೆ ಹೋಗಿ ಅರ್ಜಿ ನೀಡುವುದನ್ನು ಬಿಟ್ಟು ಸಂತೆ ಭಾಷಣದಲ್ಲಿ ಚರ್ಚೆ ಮಾಡಲು ಕಾಂಗ್ರೆಸ್ ಸರ್ಕಾರ ಆಹ್ವಾನಿಸುತ್ತಿದೆ ಎಂದು ದೂರಿದರು.
ಯೋಧರಿಗೆ ಅಪಮಾನ
ಭಾರತೀಯ ಯೋಧರು ಪ್ರಾಣದ ಹಂಗನ್ನು ತೊರೆದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, ಅದರ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದರು.
ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಬಳಸಲು ಬಿಜೆಪಿಗೆ ಮಾತ್ರ ಅಧಿಕಾರವಿದೆ. ಚುನಾವಣಾ ಉದ್ದೇಶಕ್ಕೆ ಅವರ ಚಿತ್ರ ಬಳಸುವ ಹಕ್ಕು ಯಾರಿಗೂ ಇಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ಪಕ್ಷದಿಂದ ಆಯ್ಕೆಯಾದ ಬಳಿಕ ಆ ಪಕ್ಷಕ್ಕೆ ಋಣಿಯಾಗಿರಬೇಕು ಎಂದರು.