ಮುಂಬೈ(Mumbai): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಮ್ಮೆ ರೆಪೊ ದರ ಹೆಚ್ಚಿಸಿರುವುದಾಗಿ ಆರ್ ಬಿಐ ಗವರ್ನರ್ ಶಕ್ತಿಕಾಂತದಾಸ್ ತಿಳಿಸಿದ್ದಾರೆ.
ಬುಧವಾರ ಹಣಕಾಸು ನೀತಿ ಬಿಡುಗಡೆ ಮಾಡಿ ಮಾತನಾಡಿರುವ ಅವರು, ರೆಪೊ ದರವನ್ನು ಶೇ.0.50 ರಷ್ಟು ಹೆಚ್ಚಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇದರೊಂದಿಗೆ ಪರಿಷ್ಕೃತ ರೆಪೊ ದರ ಶೇ 4.90 ಆಗಿದೆ. ವಿವಿಧ ಬ್ಯಾಂಕ್‌ಗಳ ಬಡ್ಡಿ ದರವೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಗೃಹ ಮತ್ತು ಇತರ ಸಾಲಗಳ ಇಎಂಐ ಮೇಲೆಯೂ ಪರಿಣಾಮ ಬೀರಲಿದೆ.
ಮೇ 4ರಂದು ಸಹ ಆರ್‌ಬಿಐ ರೆಪೊ ದರವನ್ನು ಶೇ 0.40 ರಷ್ಟು ಹೆಚ್ಚಿಸಿತ್ತು.ರೆಪೊ ದರ ಹೆಚ್ಚಳವಾದಾಗ ಬ್ಯಾಂಕುಗಳ ನಿಧಿ ಖರೀದಿ ವೆಚ್ಚವೂ ಹೆಚ್ಚಾಗುತ್ತದೆ. ಯಾಕೆಂದರೆ, ಬ್ಯಾಂಕುಗಳು ಆರ್‌ಬಿಐಯಿಂದ ನಿಧಿ ಪಡೆಯಲು ರೆಪೊ ದರ ಮುಖ್ಯವಾಗಿದೆ. ಸರಳವಾಗಿ ಹೇಳುವುದಿದ್ದರೆ, ದೇಶದ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐಯಿಂದ ಪಡೆಯುವ ಸಾಲದ ಬಡ್ಡಿ ದರವೇ ರೆಪೊ ದರ. ಹೀಗಾಗಿ, ಆರ್‌ಬಿಐ ರೆಪೊ ದರ ಹೆಚ್ಚಿಸಿರುವುದರಿಂದ ಬ್ಯಾಂಕುಗಳು ಸಹ ಬಡ್ಡಿ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಮೇ 4ರಂದು ರೆಪೊ ದರ ಹೆಚ್ಚಳವಾದ ಬೆನ್ನಲ್ಲೇ ಹಲವು ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳ ಬಡ್ಡಿ ದರ ಹೆಚ್ಚಳ ಮಾಡಿದ್ದವು.
ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಮೇ 5ರಂದೇ ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿದ್ದವು. ಐಸಿಐಸಿಐ ಬ್ಯಾಂಕ್ ಎಕ್ಸ್‌ಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ (ಇಬಿಎಲ್‌ಆರ್) ಅನ್ನು ಶೇ 8.10ಕ್ಕೆ ಹೆಚ್ಚಿಸಿದ್ದರೆ, ಬ್ಯಾಂಕ್ ಆಫ್ ಬರೋಡಾ ಸಾಲದ ಮೇಲಿನ ಬಡ್ಡಿದರವನ್ನು ಅನ್ನು ಶೇ 6.90ಕ್ಕೆ ಏರಿಕೆ ಮಾಡಿತ್ತು.
ದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಎಚ್‌ಡಿಎಫ್‌ಸಿ ಸಾಲದ ಮೇಲಿನ ಬಡ್ಡಿದರವನ್ನು ಜೂನ್ 7ರಂದು ಶೇ 0.35ರಷ್ಟು ಹೆಚ್ಚಳ ಮಾಡಿತ್ತು.
ರೆಪೊ ದರ ಹೆಚ್ಚಳದಿಂದ ಸಣ್ಣ ಹೂಡಿಕೆದಾರರು ಹಾಗೂ ಉಳಿತಾಯ ಮನೋಭಾವದವರಿಗೆ ತುಸು ಪ್ರಯೋಜನವೂ ಆಗುವ ಸಾಧ್ಯತೆ ಇದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು ಹೆಚ್ಚಳ ಆಗಬಹುದು ಎಂಬ ನಿರೀಕ್ಷೆ ಇದೆ.