ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಟಿಸಿ, ನಿರ್ಮಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಸ್ಪಂದನೆ ಪಡೆದಿದೆ.
ಹೇಮಂತ್ ಎಂ ರಾವ್ ಅವರು ನಿರ್ದೇಶಿಸಿರುವ ಚಿತ್ರದ ಎರಡನೇ ಭಾಗವು ಅಕ್ಟೋಬರ್ 20ರಂದು ತೆರೆ ಕಾಣಲಿದೆ ಎಂದು ಈ ಮೊದಲು ಚಿತ್ರತಂಡ ಘೋಷಿಸಿಕೊಂಡಿತ್ತು. ಆದರೆ ಇದೀಗ ಹಲವು ಕಾರಣಗಳಿಂದ ಎರಡನೇ ಪಾರ್ಟ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.
ಮನು ಮತ್ತು ಪ್ರಿಯಾರ ಪ್ರೇಮ ಕಥೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಎರಡನೇ ಪಾರ್ಟ್ ಬಿಡುಗಡೆ ನಿಗದಿತ ದಿನಾಂಕಕ್ಕಿಂತ ಒಂದು ವಾರ ಮುಂದಕ್ಕೆ ಹೋಗಿದೆ. ಚಿತ್ರವು ಅಕ್ಟೋಬರ್ 27ರಂದು ತೆರೆಗೆ ಬರುತ್ತಿದೆ. ಸ್ವತಃ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರೇ ಇದನ್ನು ಖಚಿತಪಡಿಸಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಸೆಪ್ಟೆಂಬರ್ 1ರಂದು ತೆರೆಕಂಡಿತ್ತು. ಇದರ ತೆಲುವು ವರ್ಷನ್ ಸೆಪ್ಟೆಂಬರ್ 22ರಂದು ತೆರೆಗೆ ಬಂದು ಉತ್ತಮ ಇಂಪಾಕ್ಟ್ ಬೀರಿದೆ. ಮನು ಮತ್ತು ಪ್ರಿಯಾರ ನವಿರಾದ ಲವ್ ಸ್ಟೋರಿಯನ್ನು ಮೊದಲ ಭಾಗದಲ್ಲಿ ಕಂಡಿದ್ದ ಪ್ರೇಕ್ಷಕರು, ಹತ್ತು ವರ್ಷದ ಬಳಿಕ ಮನು ಜೀವನದಲ್ಲಿ ಏನಾಗಲಿದೆ ಎಂದು ನೋಡಲು ಅಕ್ಟೋಬರ್ 27ರವರೆಗೆ ಕಾಯಬೇಕಿದೆ.
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎರಡನೇ ಭಾಗದಲ್ಲಿ ಚೈತ್ರಾ ರಾವ್ ಅವರ ಪಾತ್ರವೂ ಇರಲಿದೆ.
ಒಟಿಟಿಗೆ ಬಂತು ಎಸ್ಎಸ್ಇ 1: ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಮೇಜಾನ್ ಪ್ರೈಮ್ ನಲ್ಲಿ ಶುಕ್ರವಾರ (ಸೆ.29) ಚಿತ್ರದ ಪ್ರಸಾರ ಆರಂಭವಾಗಿದೆ.














