ಮೈಸೂರು: ನಮ್ಮ ಇತಿಹಾಸದ ನಾಗರೀಕತೆ ಹಾಗೂ ಸಂಸ್ಕೃತಿಯನ್ನು ಕಣ್ಣು ಕಟ್ಟುವಂತೆ ಕೆತ್ತನೆ ಮಾಡುವುದರ ಮೂಲಕ ಜನರು ನಾಗರೀಕತೆ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವಲ್ಲಿ ಶಿಲ್ಪ ಕಲೆಗಳ ಪಾತ್ರ ಮಹತ್ವವಾದದ್ದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಸಿ ಮಹಾದೇವಪ್ಪನವರು ಹೇಳಿದರು.
ಇಂದು ಲಲಿತ ಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಹಾಗೂ ಕರ್ನಾಟಕ ಶಿಲ್ಪಕಲಾ ಶಿಬಿರ ಅಕಾಡೆಮಿ, ಬೆಂಗಳೂರು ರವರ ಸಹಯೋಗದೊಂದಿಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ, “ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರ” ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಚರಿತ್ರೆ ಗೊತ್ತಿಲ್ಲದವರು ಚರಿತ್ರೆಯನ್ನು ಸೃಷ್ಟಿಸಲಾರರು ಎಂಬ ಡಾ ಬಿ.ಆರ್. ಅಂಬೇಡ್ಕರ್ ಅವರ ಮಾತಿನಂತೆ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಸಂಪೂರ್ಣವಾಗಿ ಅರಿಯದವರು ಶಿಲ್ಪಕಲೆ ಮತ್ತು ಕರಕುಶಲಕಲೆಗಳನ್ನು ರಚಿಸಲು ಸಾಧ್ಯವಿಲ್ಲ. ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಯೇ ಶಿಲ್ಪಕಲೆಯಾಗಿರುವಾಗ ಮೊದಲು ಅದರ ಇತಿಹಾಸವನ್ನು ತಿಳಿದು ನಂತರ ರಚಿಸುವ ಕೆಲಸ ಪ್ರತಿಯೊಬ್ಬ ಕಲಾವಿದನದ್ದಾಗಿರುತ್ತದೆ ಎಂದರು.
ದೇಶ ಕಂಡಂತಹ ಅಮರ ಶಿಲ್ಪಿ ಜಕಣ ಚಾರಿ ಅವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ಅಲ್ಲದೆ ಸೋಮನಾಥಪುರ, ಬೇಲೂರು ಮತ್ತು ಹಳೇಬೀಡಿನ ದೇವಾಯಗಳ ಒಂದೊಂದು ಕೆತ್ತನೆಗಳು ಒಂದೊಂದು ಕಥೆಯನ್ನು ಅದರ ಇತಿಹಾಸವನ್ನು ತಿಳಿಸುತ್ತವೆ. ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ -ತೊಡುಗೆ ಒಟ್ಟಾರೆಯಾಗಿ ಇತಿಹಾಸವನ್ನು ವಿವರವಾಗಿ ತಿಳಿಸುವಂತಹ ಮಹಾನ್ ಕೆಲಸವನ್ನು ಶಿಲ್ಪಕಲೆಗಳು ಮಾಡುತ್ತಿವೆ ಎಂದರು.
ಕಲಾವಿದರು ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಯುವ ಪೀಳಿಗೆಗೆ ಹಾಗೂ ಮುಂದಿನ ಪೀಳಿಗೆಗೆ ಇತಿಹಾಸದ ಸತ್ಯವನ್ನು ತಿಳಿಸುವ ಶಿಲ್ಪಕಲೆಗಳನ್ನು ರಚಿಸಿ, ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತ್ಯಂತ ವಿಶಾಲ ಮತ್ತು ಸುದೀರ್ಘವಾಗಿರುವ ಶಿಲ್ಪಕಲೆಯ ಪ್ರತಿಯೊಂದು ಕಲಾಕೃತಿಗಳು ನೋಡುಗರೊಂದಿಗೆ ತಾವೇ ಮಾತನಾಡುವಂತಿರಬೇಕು. ಅಂತಹ ಜೀವಂತ ಕಲಾಕೃತಿಗಳನ್ನು ಕಲಾವಿದರು ರಚಿಸಬೇಕು ಎಂದು ಹೇಳಿದರು.
ವಿದ್ಯಾಸಂಸ್ಥೆಗಳು ಶಿಲ್ಪಕಲೆಯನ್ನು ಕಲಿಯಲು ಆಸಕ್ತಿಯಿಂದ ಬರುವಂತಹ ವಿದ್ಯಾರ್ಥಿಗಳ ಜೊತೆ ಆಟವಾಡದೆ ಅವರಿಗೆ ಉತ್ತಮ ಶಿಕ್ಷಣ ನೀಡಿ, ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಲು ಜೊತೆಯಾಗಬೇಕು. ಇದಕ್ಕೆ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ಸಹಕರಿಸಿ ಆಸಕ್ತಿಯಿಂದ ಕಲಿತು ಶಿಲ್ಪಕಲೆ ಹಾಗೂ ಕರಕುಶಲ ಕಲೆಗಳಂತಹ ಅದ್ಬುತ ಕಲೆಗಳನ್ನು ಉಳಿಸಿ ಬೆಳಸಬೇಕು ಎಂದು ಸಲಹೆ ನೀಡಿದರು.
ಚೆನ್ನಪಟ್ಟಣದ ಗೊಂಬೆಗಳು, ಕುಂಬಾರರ ಮಡಿಕೆಗಳು, ಕಲ್ಲು ಕೆತ್ತನೆಗಳು ಹಾಗೂ ಇತ್ಯಾದಿಗಳನ್ನು ತಂದು ಅದಕ್ಕೆ ವಿಭಿನ್ನ ರೂಪ ಕೊಟ್ಟು ವಿಶೇಷ ಕಲಾಕೃತಿಗಳ ರಚನೆ ಮಾಡಬೇಕು. ದಸರಾ ಸಂದರ್ಭದಲ್ಲಿ ಕಲಾ ವಿದ್ಯಾರ್ಥಿಗಳು ರಚಿಸುವ ಉತ್ಪನ್ನಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು.
ದಸರಾ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಶಿಲ್ಪ ಕಲೆ, ಕರಕುಶಲ ಕಲೆ ಹಾಗೂ ಇತ್ಯಾದಿ ವಿಷಯಗಳ ಮೇಲೆ ಸ್ಪರ್ಧೆಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸುವಂತೆ ಮಾಡಬೇಕು. ಇದರಿಂದ ಅವರಲ್ಲಿ ಹೆಚ್ಚಿನ ಆಸಕ್ತಿ ಹಾಗೂ ವಿಷಯದ ಮೇಲಿನ ಜ್ಞಾನ ಬುದ್ಧಿಸುತ್ತದೆ ಎಂದು ತಿಳಿಸಿದರು.
ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯ ಉಪ ವಿಶೇಷಾಧಿಕಾರಿಗಳು ಹಾಗೂ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರದ ಎ. ದೇವರಾಜು ಅವರು ಮಾತನಾಡಿ,ಈ ವರ್ಷ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರವು ಭಾರತ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಚಳುವಳಿ ಮತ್ತು ಸಂವಿಧಾನದ ಮಹತ್ವ ಎಂಬ ವಿಷಯದ ಮೇಲೆ 10 ದಿನ ನಡೆಯಲಿದ್ದು, ರಾಜ್ಯದ ವಿವಿಧ ಭಾಗದಿಂದ ಪ್ರಸಿದ್ಧ ಕಲಾವಿದರು ಆಗಮಿಸಿ, ಶಿಬಿರಾರ್ಥಿಗಳಿಗೆ ಉಪಯುಕ್ತವಾದ ಸಲಹೆ ನೀಡಲಿದ್ದಾರೆ. ಈ ಶಿಬಿರವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಪ್ರತಿಯೊಬ್ಬರು ಶಿಬಿರದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಎಂ.ಗಾಯತ್ರಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಎಂ.ಸಿ.ರಮೇಶ್ ಸೇರಿದಂತೆ ಲಲಿತ ಕಲೆ ಮತ್ತು ಕರಕುಶಲ ಕಲೆಯ ಕಲಾವಿದರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.