ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೊನ್ನೆ ಅಷ್ಟೇ ಬೋರ್ಡ್ ಮೀಟಿಂಗ್ನಲ್ಲಿ ಶೇಕಡಾ 5ರಷ್ಟು ಮೆಟ್ರೋ ದರ ಏರಿಕೆ ಒಪ್ಪಿಗೆ ಬಳಿಕ ಬಿಎಂಆರ್ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಗೆ ಇಂದು (ಫೆಬ್ರವರಿ 04) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ ಇದೇ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಎಂಆರ್ಸಿಎಲ್ ಅಧಿಕೃತ ಆದೇಶ ಹೊರಡಿಸಲಿದೆ.
ಕಳೆದ ವರ್ಷ ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಏರ್ಪಟ್ಟಿತ್ತು, ರಾಜ್ಯ ಸರ್ಕಾರವೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದು ಎಂದು ಬಿಜೆಪಿ ನಾಯಕರು ಹೇಳಿದ್ರೆ, ಇತ್ತ ಕಾಂಗ್ರೆಸ್ನವರು ಕೇಂದ್ರವೇ ಹೆಚ್ಚಳ ಮಾಡಿದೆ ಎಂದು ಆರೋಪ ಪ್ರತ್ಯಾರೋಪ ಮಾಡಿದ್ದರು. ಆದ್ರೆ, ಈ ಬಾರಿ ಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರವೇ ಒಪ್ಪಿಗೆ ಸೂಚಿಸಿದೆ.
ಮೆಟ್ರೋದಲ್ಲಿ ಮೆಜೆಸ್ಟಿಕ್ನಿಂದ ವೈಟ್ಫೀಲ್ಡ್ಗೆ ಪ್ರಸ್ತುತ 80 ರೂ. ಇದ್ದು, ಶೇ. 5% ಹೆಚ್ಚಳ ಬಳಿಕ 80 ರೂ.ನಿಂದ 84ರೂ. ಆಗುತ್ತೆ. 10 ರೂ. ಇರುವ ಟಿಕೆಟ್ ದರ ಶೇ 5ರಷ್ಟು ಹೆಚ್ಚಳವಾದರೆ 11 ರೂ. ಆಗಲಿದೆ. 90 ರೂ. ಇರುವ ಟಿಕೆಟ್ ದರ 95 ರೂ. ಆಗಲಿದೆ. ಮೆಜೆಸ್ಟಿಕ್ನಿಂದ ಬೊಮ್ಮಸಂದ್ರಕ್ಕೆ 80 ರೂ.ನಿಂದ 84 ರೂ.ಗೆ ಹೆಚ್ಚಳ. ಮೆಜೆಸ್ಟಿಕ್ನಿಂದ ಚಲ್ಲಘಟ್ಟಕ್ಕೆ 60 ರೂ. ಟು 63 ರೂ.
ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಬಳಿಕ ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಎಂಆರ್ಸಿಎಲ್, ಶೇಕಡಾ 71.5ಕ್ಕೆ ದರ ಇಳಿಕೆ ಮಾಡಿತ್ತು. ಆದರೂ ಸಹ ನಮ್ಮ ಮೆಟ್ರೋ ಈಗ ಭಾರತದಲ್ಲಿಯೇ ಅತ್ಯಂತ ದುಬಾರಿ ಮೆಟ್ರೋ ಎನ್ನುವ ಬಿರುದುಕೊಂಡಿದ್ದು, ಇದೀಗ ಮತ್ತೆ ಶೇ.5ರಷ್ಟು ಟಿಕೆಟ್ ದರ ಹೆಚ್ಚಳವಾಗಿದ್ದರಿಂದ ಪ್ರಯಾಣಿಕರ ಮತ್ತಷ್ಟು ಹೊರೆಯಾಗಲಿದೆ.















