ನವದೆಹಲಿ : ಬೀದಿ ನಾಯಿಗಳ ಸಮಸ್ಯೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದೇ ವೇಳೆ ನಾಯಿ ಕಡಿತದಿಂದ ಸಾವನ್ನಪ್ಪಿವರಿಗೆ ಅಥವಾ ಗಂಭೀರ ಗಾಯಕ್ಕೆ ಸರ್ಕಾರಗಳ ಮೇಲೆ ಭಾರೀ ಹಣಕಾಸು ಪರಿಹಾರ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ವಿಕ್ರಮ್ ನಾಥ್, ನ್ಯಾ.ಸಂದೀಪ್ ಮೆಹ್ತಾ ಮತ್ತು ನ್ಯಾ.ಎನ್.ವಿ.ಅಂಜಾರಿಯಾ ಅವರನ್ನೊಳಗೊಂಡ ಪೀಠವು, ನಾಯಿಗಳಿಗೆ ಆಹಾರ ನೀಡುವವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದೆ. ಬೀದಿ ನಾಯಿಗಳ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ನೀವು ಸಂಪೂರ್ಣ ವಿಫಲರಾಗಿದ್ದೀರಿ, ಜೊತೆಗೆ ABC ನಿಯಮಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. 1950ರ ದಶಕದಿಂದಲೂ ಈ ಸಮಸ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಸರ್ಕಾರಗಳ ಕಾರಣದಿಂದಾಗಿ ಸಮಸ್ಯೆ ಸಾವಿರಪಟ್ಟು ಹೆಚ್ಚಾಗಿದೆ.
ನಾಯಿ ಕಡಿತದಿಂದ ಪ್ರತಿ ಪುರುಷ, ಮಹಿಳೆ ಮತ್ತು ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರದ ಮೇಲೆ ಭಾರೀ ಪರಿಹಾರ ವಿಧಿಸಬಹುದು ಎಂದಿದೆ. ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲಿನ ದಾಳಿ, ಗಾಯ ಅಥವಾ ಸಾವಿಗೆ ರಾಜ್ಯಗಳು ಜವಾಬ್ದಾರಿಯಾಗಬೇಕು ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು.
ನಾವು ಶಾಸನಬದ್ಧ ನಿಬಂಧನೆಯ ಅನುಷ್ಠಾನವನ್ನು ಬಯಸುತ್ತೇವೆ. ಅದನ್ನು ಮಾಡಲು ನಮಗೆ ಅವಕಾಶ ನೀಡಿ. ಇದು ನ್ಯಾಯಾಲಯದ ವಿಚಾರಣೆಯ ಬದಲು ಸಾರ್ವಜನಿಕ ವೇದಿಕೆಯಾಗಿದೆ. ಪ್ರತಿ ನಾಯಿ ಕಡಿತಕ್ಕೆ, ಪ್ರತಿ ಸಾವಿಗೆ, ಅಗತ್ಯ ವ್ಯವಸ್ಥೆಗಳನ್ನು ಮಾಡದಿದ್ದಕ್ಕಾಗಿ ನಾವು ರಾಜ್ಯಗಳಿಗೆ ಭಾರೀ ಪರಿಹಾರವನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಮತ್ತು ನಾಯಿಗಳಿಗೆ ಆಹಾರವನ್ನು ನೀಡುವವರಿಗೆ ಹೊಣೆಗಾರರನ್ನಾಗಿ ಸಹ ಮಾಡಬೇಕಾಗುತ್ತದೆ ಎಂದು ಪೀಠ ಹೇಳಿದೆ.















