ಶೇಷನ ಈ ಕಥೆಯು ವ್ಯಾಸ ಮಹಾಭಾರತದ ಆದಿ ಪರ್ವದ ಆಸ್ತೀಕ ಪರ್ವ (ಅಧ್ಯಾಯ ೩೨) ದಲ್ಲಿ ಬರುತ್ತದೆ. ಈ ಕಥೆಯನ್ನು ಸೂತ ಪೌರಾಣಿಕ ಉಗ್ರಶ್ರವನು ನೈಮಿಷಾರಣ್ಯದಲ್ಲಿ ಶೌನಕಾದಿ ಮುನಿಗಳಿಗೆ ಹೇಳಿದನು.
ಕದ್ರುವು ಮಕ್ಕಳಾದ ನಾಗಗಳನ್ನು “ಜನಮೇಜಯನ ಸರ್ಪಸತ್ರದಲ್ಲಿ ಸುಟ್ಟು ಭಸ್ಮರಾಗಿ!” ಎಂದು ಶಪಿಸಲು, ಮಹಾಯಶ ಭಗವಾನ್ ಶೇಷನು ತಾಯಿಯನ್ನು ತೊರೆದು ಯತವ್ರತನಾಗಿ, ಗಾಳಿಯನ್ನು ಮಾತ್ರ ಸೇವಿಸುತ್ತಾ ವಿಪುಲ ತಪಸ್ಸನ್ನು ಕೈಗೊಂಡನು. ಗಂಧಮಾದನ, ಬದರಿ, ಗೋಕರ್ಣ, ಮತ್ತು ಪುಷ್ಕರಗಳ ಅರಣ್ಯಗಳಲ್ಲಿ ಮತ್ತು ಹಿಮತ್ ಪರ್ವತದಲ್ಲಿ ತಪಸ್ಸು ಮಾಡಿದನು. ಈ ಎಲ್ಲ ಪುಣ್ಯ ತೀರ್ಥ-ಆಯತನಗಳಲ್ಲಿ ಏಕಾಂತಶೀಲನೂ, ನಿಯತವ್ರತನೂ, ಸತತ ಜಿತೇಂದ್ರಿಯನೂ ಆಗಿದ್ದನು. ಜಟೆ ಕಟ್ಟಿ ಹರುಕು ಬಟ್ಟೆಯನ್ನು ಧರಿಸಿ, ಚರ್ಮ-ಮಾಂಸಗಳು ಒಣಗಿಹೋಗಿ, ಘೋರ ತಪಸ್ಸನ್ನು ತಪಿಸುತ್ತಿರುವ ಆ ಪ್ರಭುವನ್ನು ಪಿತಾಮಹನು ನೋಡಿದನು. ತಪಿಸುತ್ತಿರುವ ಸತ್ಯಧೃತಿಗೆ ಪಿತಾಮಹನು ಹೇಳಿದನು: “ಶೇಷ! ಇದೇನು ಮಾಡುತ್ತಿದ್ದೀಯೆ? ಲೋಕಕ್ಕೆ ಒಳಿತನ್ನು ಮಾಡು. ನಿನ್ನ ಈ ತೀವ್ರ ತಪಸ್ಸಿನಿಂದ ಲೋಕಗಳು ಸುಡುತ್ತಿವೆ. ನಿನ್ನ ಹೃದಯದಲ್ಲಿರುವ ಬಯಕೆಯನ್ನು ನನಗೆ ಹೇಳು.”
ಶೇಷನು ಹೇಳಿದನು: “ನನ್ನ ಸಹೋದರರೆಲ್ಲರೂ ಮಂದಚೇತಸರು. ನನಗೆ ಅವರೊಡನೆ ವಾಸಿಸುವುದು ಬೇಡ. ಭಗವನ್! ಇದನ್ನೇ ನನಗೆ ಕರುಣಿಸು. ಅವರು ಪರಸ್ಪರರಲ್ಲಿ ಸದಾ ಅಸೂಯೆ ಮತ್ತು ಶತ್ರುತ್ವದಲ್ಲಿಯೇ ನಿರತರಾಗಿದ್ದಾರೆ. ಆದುದರಿಂದಲೇ ನಾನು ತಪಸ್ಸನ್ನು ಕೈಗೊಂಡೆನು. ಅವರನ್ನು ನೋಡುವುದೂ ಬೇಡವಾಗಿದೆ. ವಿನತೆ ಮತ್ತು ಅವಳ ಮಗ, ನಮ್ಮ ತಮ್ಮ, ವೈನತೇಯರಿಗೆ ಅವರು ಸದಾ ಕಷ್ಟಗಳನ್ನು ಕೊಡುತ್ತಿದ್ದಾರೆ. ತಂದೆ ಮಹಾತ್ಮ ಕಶ್ಯಪನ ವರದಾನದಿಂದ ಮಹಾಬಲನಾದ ಅವನನ್ನು ದ್ವೇಷಿಸುತ್ತಾ ಬಂದಿದ್ದಾರೆ. ಈ ದೇಹದಿಂದ ಮುಕ್ತಿಯನ್ನು ಪಡೆಯಲೋಸುಗವೇ ನಾನು ಈ ತಪಸ್ಸನ್ನು ಮಾಡುತ್ತಿರುವೆನು. ಯಾವ ಕಾರಣದಿಂದಲೂ ನಾನು ಅವರೊಂದಿಗೆ ಜೀವಿಸಲು ಬಯಸುವುದಿಲ್ಲ.”
ಬ್ರಹ್ಮನು ಹೇಳಿದನು: “ಶೇಷ! ನಿನ್ನ ಸಹೋದರರ ಕುರಿತು ಎಲ್ಲವನ್ನೂ ನಾನು ತಿಳಿದಿದ್ದೇನೆ. ಅಪರಾಧಗೈದು ತಾಯಿಯಿಂದ ಪಡೆದ ಶಾಪದಿಂದ ನಿನ್ನ ಸಹೋದರರಲ್ಲಿ ಮಹಾಭಯವಿದೆ. ಪೂರ್ವದಲ್ಲಿಯೇ ನಾನು ಇದಕ್ಕೆ ಪರಿಹಾರವನ್ನು ಮಾಡಿದ್ದೇನೆ. ನಿನ್ನ ಸಹೋದರರೆಲ್ಲರ ಸಲುವಾಗಿ ನೀನು ಶೋಕಿಸ ಬೇಡ. ನಿನಗಿಷ್ಟವಿರುವ ಯಾವ ವರವನ್ನಾದರೂ ಕೇಳು. ನಿನ್ನಿಂದ ಪರಮ ಪ್ರೀತನಾದ ನಾನು ಇಂದು ನಿನಗೆ ವರವನ್ನು ಕೊಡುತ್ತೇನೆ. ನಿನ್ನ ಬುದ್ಧಿಯು ಧರ್ಮದಲ್ಲಿ ನಿರತವಾಗಿರುವುದನ್ನು ಗಮನಿಸಿದ್ದೇನೆ. ನಿನ್ನ ಬುದ್ಧಿಯು ಧರ್ಮದಲ್ಲಿ ಇನ್ನೂ ಸುಸ್ಥಿರವಾಗಿರಲಿ.”
ಶೇಷನು ಹೇಳಿದನು: “ಪ್ರಪಿತಾಮಹ! ಈಶ್ವರ, ಧರ್ಮ ಮತ್ತು ತಪಸ್ಸಿನಲ್ಲಿ ನನ್ನ ಬುದ್ಧಿಯು ರಮಿಸುತ್ತಿರಲಿ. ಇದೇ ನನ್ನ ಬಯಕೆಯ ವರ.”
ಬ್ರಹ್ಮನು ಹೇಳಿದನು: “ಶೇಷ! ನಿನ್ನ ಈ ದಮ ಮತ್ತು ಪ್ರಶಮನಗಳಿಂದ ಪ್ರೀತನಾಗಿದ್ದೇನೆ. ಪ್ರಜಾಹಿತಕ್ಕೋಸ್ಕರವಾಗಿ ನನ್ನ ನಿಯೋಗದಂತೆ ನಾನು ಹೇಳುವ ಈ ಕಾರ್ಯವೂ ನಿನ್ನಿಂದ ಆಗಲಿ. ಪರ್ವತ, ಕಣಿವೆ, ಸಾಗರ, ಪಟ್ಟಣಗಳನ್ನು ಹೊತ್ತು ಓಲಾಡುತ್ತಿರುವ ಈ ಭೂಮಿಯು ಅಚಲವಾಗಿರುವಂತೆ ನೀನು ಅವಳನ್ನು ಸರಿಯಾಗಿ ಹೊತ್ತಿ ನಿಲ್ಲು.”
ಶೇಷನು ಹೇಳಿದನು: “ದೇವ! ವರದ! ಪ್ರಜಾಪತಿ! ಮಹೀಪತಿ! ಭೂತಪತಿ! ಜಗತ್ಪತಿ! ಪ್ರಜಾಪತಿ! ನಿನ್ನ ಹೇಳಿಕೆಯಂತೆ ಈ ಮಹಿಯನ್ನು ನಿಶ್ಚಲವಾಗಿ ನನ್ನ ಶಿರದಮೇಲೆ ಹೊರುತ್ತೇನೆ.”
ಬ್ರಹ್ಮನು ಹೇಳಿದನು: “ಭುಜಂಗೋತ್ತಮ ಶೇಷ! ಭೂಮಿಯ ಅಡಿಯಲ್ಲಿ ಹೋಗು. ನಿನಗೆ ಅವಳೇ ದಾರಿಯನ್ನು ಮಾಡಿಕೊಡುವಳು. ಈ ಭೂಮಿಯನ್ನು ನೀನು ಹೊರುವುದರಿಂದ ನನಗೆ ಮಹಾ ಪ್ರಿಯವಾದುದನ್ನು ಮಾಡಿದಹಾಗೆ ಆಗುತ್ತದೆ.”
ನಾಗಗಳ ಅಗ್ರಜ ಆ ಪ್ರಭುವು “ಹಾಗೆಯೇ ಆಗಲಿ” ಎಂದು ಹೇಳಿ, ದರವನ್ನು ಪ್ರವೇಶಿಸಿ, ಮಹೀದೇವಿಯನ್ನು ಶಿರದ ಮೇಲೆ ಹೊತ್ತು ಈ ಸಮುದ್ರನೇಮಿಯನ್ನು ಪರಿಗ್ರಹಿಸಿದನು.
ಬ್ರಹ್ಮನು ಹೇಳಿದನು: “ಶೇಷ! ಒಬ್ಬನೇ ಈ ಮಹಿಯನ್ನು ಧಾರಣಮಾಡಿದ ನೀನು ನಾಗಗಳಲ್ಲೆಲ್ಲಾ ಉತ್ತಮನೂ ಧರ್ಮದೇವನೂ ಆಗಿದ್ದೀಯೆ. ಇಂದ್ರ ಮತ್ತು ನಾನು ಮಾತ್ರ ಈ ಮಹಿಯನ್ನು ಹೊರಬಲ್ಲೆವು.”
ಈ ರೀತಿ ವಿಭು ಬ್ರಹ್ಮನ ಶಾಸನದಂತೆ ಪ್ರತಾಪಿ ನಾಗ ಅನಂತನು ಭೂಮಿಯ ಅಡಿಯಲ್ಲಿ ವಾಸಿಸುತ್ತಾ ಒಬ್ಬನೇ ಈ ವಸುಧೆಯನ್ನು ಹೊತ್ತಿದ್ದಾನೆ. ಭಗವಾನ್ ಅಮರೋತ್ತಮ ಪಿತಾಮಹನು ಅನಂತನಿಗೆ ಸಖನಾಗಿ ವೈನತೇಯ ಸುಪರ್ಣನನ್ನು ನಿಯೋಜಿಸಿದನು.