ಉದಕಮಂಡಲದಲ್ಲಿನ (ಊಟಿ) ನೂತನ ಸಂಯೋಜಿತ ನ್ಯಾಯಾಲಯ ಸಮುಚ್ಚಯದಲ್ಲಿ ಮಹಿಳಾ ನ್ಯಾಯವಾದಿಗಳಿಗೆ ಶೌಚಾಲಯ ಸೌಕರ್ಯ ಕಲ್ಪಿಸಿರುವುದರ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ನೂತನ ನ್ಯಾಯಾಲಯ ಸಮುಚ್ಚಯದಲ್ಲಿ ಮಹಿಳೆಯರಿಗೆ ಸೌಲಭ್ಯ ಕಡಿತಗೊಳಿಸಿರುವುದನ್ನು ಪ್ರಶ್ನಿಸಿ ನೀಲಗಿರಿಯ ಮಹಿಳಾ ವಕೀಲರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.
ಮಹಿಳಾ ನ್ಯಾಯವಾದಿಗಳಿಗೆ ಹಾಲಿ ಕಲ್ಪಿಸಲಾಗಿರುವ ಸೌಕರ್ಯದ ಬಗ್ಗೆ ರಿಜಿಸ್ಟ್ರಾರ್ ಜನರಲ್ ಅವರು ಸಲ್ಲಿಸಿರುವ ಹಿಂದಿನ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಶೌಚಾಲಯ ವ್ಯವಸ್ಥೆ ಕಡಿತವಾಗಿದೆಯೇ ಅಥವಾ ಅದನ್ನು ಸ್ಥಳಾವಕಾಶ ಕಿರಿದಾಗಿಸಲಾಗಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. “ರಿಜಿಸ್ಟ್ರಾರ್ ಜನರಲ್ ಅವರ ಮೂಲಕ ಹೈಕೋರ್ಟ್ ಆಡಳಿತ ವಿಸ್ತೃತ ವರದಿ ಸಲ್ಲಿಸಬೇಕು. ಈ ವರದಿಯು ಭಾನುವಾರದೊಳಗೆ ವಿದ್ಯುನ್ಮಾನ ವ್ಯವಸ್ಥೆ ಮೂಲಕ ರಿಜಿಸ್ಟ್ರಿಗೆ ತಲುಪಬೇಕು. ಸೋಮವಾರ, ಜೂನ್ 12ರಂದು ಪ್ರಕರಣವನ್ನು ವಿಚಾರಣೆಗೆ ನಿಗದಿಗೊಳಿಸಬೇಕು” ಎಂದು ಪೀಠ ಆದೇಶಿಸಿದೆ.
ರಿಜಿಸ್ಟ್ರಾರ್ ಜನರಲ್ ವರದಿಯನ್ನು ಪರಿಶೀಲಿಸಿದ ಬಳಿಕ ಸೂಕ್ತ ಆದೇಶ ಮಾಡುವ ಕುರಿತು ನ್ಯಾಯಾಲಯವು ಪರಿಗಣಿಸಲಿದೆ ಎಂದು ಪೀಠ ಹೇಳಿದೆ.
ಮಹಿಳೆಯರಿಗೆ ಸೌಲಭ್ಯ ಕಲ್ಪಿಸಲು ಹಂಚಿಕೆ ಮಾಡಿದ್ದ ಸ್ಥಳ ಕಡಿತ ಮಾಡಿರುವ ಕುರಿತಾದ ಪ್ರಮುಖ ಬೇಡಿಕೆಯನ್ನು ಪೀಠವು ವಿಚಾರಣೆಯ ಸಂದರ್ಭದಲ್ಲಿ ಪರಿಗಣಿಸಿತು. ಈ ಸಂಬಂಧ, ಮೂರು ದಶಕಗಳಿಂದ ಮಹಿಳಾ ವಕೀಲರು ನ್ಯಾಯಾಲಯದ ಸಮುಚ್ಚಯದಲ್ಲಿ ಶೌಚಾಲಯಕ್ಕಾಗಿ ಹೋರಾಟ ನಡೆಸುತ್ತಿರುವುದ ಕುರಿತು ಬಾರ್ ಅಂಡ್ ಬೆಂಚ್ ವರದಿಯನ್ನೂ ಪೀಠ ಉಲ್ಲೇಖಿಸಿತು.
“ನ್ಯಾಯಾಲಯದ ಸಮುಚ್ಚಯದಲ್ಲಿ ಕೆಲವು ಮೂಲಸೌಕರ್ಯಕ್ಕೆ ಮಹಿಳಾ ವಕೀಲರು ಬೇಡಿಕೆ ಇಟ್ಟಿದ್ದು, ಇವುಗಳಲ್ಲಿ ನೂತನ ನ್ಯಾಯಾಲಯ ಸಮುಚ್ಚಯದಲ್ಲಿ ಅವರಿಗೆ ಹಂಚಿಕೆ ಮಾಡಿದ್ದ ಸ್ಥಳಾವಕಾಶವನ್ನು ಕಡಿತ ಮಾಡಿರುವುದು ಪ್ರಮುಖ ಬೇಡಿಕೆಯಾಗಿದೆ. ಇದು ಆನ್ ಲೈನ್ ಸುದ್ದಿ ಪೋರ್ಟಲ್ ನಲ್ಲಿ ವರದಿಯಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಏತನ್ಮಧ್ಯೆ, ಮದ್ರಾಸ್ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರು ಸಲ್ಲಿಸಿರುವ ವರದಿಯ ಕುರಿತು ಸುಪ್ರೀಂ ಕೋರ್ಟ್ನ ರಿಜಿಸ್ಟ್ರಿಯು ಗಮನಸೆಳೆಯಿತು.
“ನೂತನ ನ್ಯಾಯಾಲಯ ಸಮುಚ್ಚಯದಲ್ಲಿ ಮಹಿಳಾ ವಕೀಲರಿಗೆ ಕಲ್ಪಿಸಿರುವ ಸೌಲಭ್ಯದ ಕುರಿತು ವಿಸ್ತೃತವಾಗಿ ರಿಜಿಸ್ಟ್ರಾರ್ ಜನರಲ್ ವರದಿಯಲ್ಲಿ ವಿವರಿಸಲಾಗಿಲ್ಲ. ಹಿಂದೆ ಲಭ್ಯವಿದ್ದ ಜಾಗದಲ್ಲಿ ಸೌಲಭ್ಯವನ್ನು ಕಡಿತಗೊಳಿಸಲಾಗಿದೆಯೇ ಎಂಬುದರ ಉಲ್ಲೇಖವಿಲ್ಲ” ಎಂದಿರುವ ನ್ಯಾಯಾಲಯವು ಹೊಸದಾಗಿ ವರದಿ ಬಯಸಿದೆ.
ಮಹಿಳಾ ವಕೀಲರ ಅರ್ಜಿಗೆ ಆಕ್ಷೇಪಿಸಿರುವ ನೀಲಗಿರಿ ಜಿಲ್ಲಾ ವಕೀಲರ ಸಂಘವು (ಎನ್ ಡಿಬಿಎ) ತಮ್ಮನ್ನೂ ಕಕ್ಷಿದಾರರನ್ನಾಗಿಸಲು ಕೋರಿದೆ. “ಕೆಲವು ಅಸಮಾಧಾನಿತ ಸದಸ್ಯರು (ಮಹಿಳಾ ವಕೀಲರು) ಅಗೌರವ ತರುತ್ತಿದ್ದಾರೆ. ಹೈಕೋರ್ಟ್ ನ ತಂಡವೊಂದನ್ನು ಪರಿಶೀಲನೆಗೆ ಕಳುಹಿಸಿ. ಇದರಿಂದ ಇಡೀ ನೀಲಗಿರಿ ಜಿಲ್ಲಾ ವಕೀಲರ ಸಂಸ್ಥೆಯ ಗೌರವಕ್ಕೆ ಚ್ಯುತಿಯಾಗಿದೆ” ಎಂದು ಎನ್ ಡಿಬಿಎ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವಿ ಮೋಹನ ವಾದಿಸಿದರು. ಪೀಠವು ಎನ್ ಡಿಬಿಎ ಅರ್ಜಿಯನ್ನು ಮಾನ್ಯ ಮಾಡಿದ್ದು, ಕಕ್ಷಿದಾರರನ್ನಾಗಿಸಲು ಅನುಮತಿಸಿದೆ.