ವಿವಿಧ ರಾಜ್ಯಗಳು ಉಪ ಮುಖ್ಯಮಂತ್ರಿಗಳನ್ನು (ಡಿಸಿಎಂ) ನೇಮಕ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ (ಪಬ್ಲಿಕ್ ಪೊಲಿಟಿಕಲ್ ಪಾರ್ಟಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).
ಉಪ ಮುಖ್ಯಮಂತ್ರಿಯ ಪದನಾಮ ಮುಖ್ಯಮಂತ್ರಿಯನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕು ಎಂಬ ಸಾಂವಿಧಾನಿಕ ನಿಲುವನ್ನು ಉಲ್ಲಂಘಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.
“ರಾಜ್ಯಗಳಲ್ಲಿ ಉಪಮುಖ್ಯಮಂತ್ರಿಗಳ ನೇಮಕವನ್ನು ಪ್ರಶ್ನಿಸಿ ಅರ್ಜಿದಾರರು ವಿಧಿ 32ರ ಪ್ರಕಾರ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಾಂವಿಧಾನಿಕವಾಗಿ ಅಂತಹ ಯಾವುದೇ ಹುದ್ದೆ ಇಲ್ಲ ಎಂದು ಅವರು ವಾದಿಸುತ್ತಾರೆ. ರಾಜ್ಯ ಸರ್ಕಾರಗಳಲ್ಲಿ ಉಪ ಮುಖ್ಯಮಂತ್ರಿಯು ಮೊತ್ತಮೊದಲು ಒಬ್ಬ ಸಚಿವರಾಗಿರುತ್ತಾರೆ. ಉಪ ಮುಖ್ಯಮಂತ್ರಿ ಎಂಬ ಪದನಾಮವು ಮುಖ್ಯಮಂತ್ರಿಯನ್ನು ವಿಧಾನಸಭೆಯು ಆಯ್ಕೆ ಮಾಡಬೇಕು ಎಂಬ ಸಾಂವಿಧಾನಿಕ ನಿಲುವನ್ನು ಉಲ್ಲಂಘಿಸುವುದಿಲ್ಲ. ಹಾಗಾಗಿ, ಮನವಿಯಲ್ಲಿ ಹುರುಳಿಲ್ಲವಾದ್ದರಿಂದ ವಜಾಗೊಳಿಸಲಾಗುತ್ತಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಪ ಮುಖ್ಯಮಂತ್ರಿ ನೇಮಕಾತಿಗಳು ಹೆಚ್ಚಾಗಿ ಧರ್ಮ ಮತಿತರ ಪರಿಗಣನೆಗಳ ಆಧಾರದ ಮೇಲೆ ನಡೆಯುತ್ತಿದ್ದು 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಪಬ್ಲಿಕ್ ಪೊಲಿಟಿಕಲ್ ಪಾರ್ಟಿ ವಾದಿಸಿತ್ತು.
ಉಪ ಮುಖ್ಯಮಂತ್ರಿಯು ರಾಜ್ಯ ಸರ್ಕಾರದ ಸದಸ್ಯರಾಗಿದ್ದು ಸಾಮಾನ್ಯವಾಗಿ ಮಂತ್ರಿಮಂಡಲದಲ್ಲಿ ಎರಡನೇ ಅತ್ಯುನ್ನತ ಶ್ರೇಣಿಯ ಕಾರ್ಯಾಂಗ ಅಧಿಕಾರಿಯಾಗಿರುತ್ತಾರೆ, ಅವರಿಗೆ ಯಾವುದೇ ನಿರ್ದಿಷ್ಟ ಅಧಿಕಾರಗಳಿಲ್ಲ.
ದೇಶದ ಇಪ್ಪತ್ತೆಂಟು ರಾಜ್ಯಗಳ ಪೈಕಿ ಹದಿನಾಲ್ಕು ರಾಜ್ಯಗಳಲ್ಲಿ ಉಪಮುಖ್ಯಮಂತ್ರಿಗಳು ಸೇವೆ ಸಲ್ಲಿಸುತ್ತಿದ್ದಾರೆ.