ಮುಂಬೈ(Mumbai): ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನಲ್ಲಿ ಭಾಗಿಯಾಗಿರುವ ಶಿವಸೇನೆಯ 53 ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ಮಹಾರಾಷ್ಟ್ರದ ನೂತನ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸೋಮವಾರ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ ಸುನಿಲ್ ಪ್ರಭು ಸಲ್ಲಿಸಿರುವ ಮನವಿಯನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪೀಠದ ಮುಂದೆ ಉಲ್ಲೇಖಿಸಿದರು. ಪ್ರಭು ಅವರು ಶಿವಸೇನೆಯ ಮುಖ್ಯ ವಿಪ್ ಆಗಿದ್ದಾರೆ.
ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಏಕನಾಥ್ ಶಿಂಧೆ ಅವರ 39 ಶಾಸಕರ ಅನರ್ಹತೆಗೆ ಸಂಬಂಧಿಸಿದ ಪ್ರಕರಣ ಜುಲೈ 27ರಂದು ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ತಿಳಿಸಿದ್ದಾರೆ.
ಪ್ರಕರಣವನ್ನು ನಿರ್ಧರಿಸಲು ಹೊಸ ಪೀಠವನ್ನು ರಚಿಸುವವರೆಗೆ ಶಾಸಕರ ವಿರುದ್ಧ ಯಾವುದೇ ಕ್ರಮ ಅಥವಾ ವಿಚಾರಣೆಯನ್ನು ತೆಗೆದುಕೊಳ್ಳಬಾರದು ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ತಿಳಿಸುವಂತೆ ನ್ಯಾಯಾಲಯವು ಅರ್ಜಿದಾರರರಿಗೆ ಸೂಚಿಸಿದೆ.
ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ಕುರಿತು ಸ್ಪೀಕರ್‌ಗೆ ತಿಳಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದರು.
ಡೆಪ್ಯುಟಿ ಸ್ಪೀಕರ್ ಅವರು ಶಿವಸೇನೆಯ ಬಂಡಾಯ ಶಾಸಕರನ್ನು ಅನರ್ಹಗೊಳಿಸಿರುವುದನ್ನು ಪ್ರಸ್ನಿಸಿರುವ ಎರಡು ಮನವಿಗಳು ನ್ಯಾಯಾಲಯದ ಮುಂದಿವೆ. ಬಹುಮತ ಸಾಬೀತುಪಡಿಸುವಂತೆ ಕಾನೂನುಬಾಹಿರವಾಗಿ ಮಹಾರಾಷ್ಟ್ರ ರಾಜ್ಯಪಾಲರು ಆದೇಶಿಸಿರುವುದನ್ನು ಪ್ರಶ್ನಿಸಿ ಸುನಿಲ್ ಪ್ರಭು ಅವರು ಸಲ್ಲಿಸಿರುವ ಮೂರನೇ ಮನವಿಯು ಸರ್ವೋಚ್ಚ ನ್ಯಾಯಾಲಯದ ಮುಂದಿದೆ.
ಅಜಯ್ ಚೌಧರಿ ಮತ್ತು ಸುನಿಲ್ ಅವರನ್ನು ಕ್ರಮವಾಗಿ ಶಿವಸೇನೆಯ ಸದನದ ನಾಯಕ ಮತ್ತು ಮುಖ್ಯ ವಿಪ್ ಸ್ಥಾನದಿಂದ ಹೊಸ ಸ್ಪೀಕರ್ ವಜಾ ಮಾಡಿದ್ದನ್ನು ಪ್ರಶ್ನಿಸಿ ಪ್ರಭು ಸಲ್ಲಿಸಿರುವ ನಾಲ್ಕನೇ ಮನವಿಯು ಸುಪ್ರೀಂ ಕೋರ್ಟ್ ಮುಂದಿದೆ.