ತಂದೆ-ಮಗ ಮತ್ತು ತಾಯಿ-ಮಗಳ ಪ್ರೀತಿ ಮತ್ತು ಬಾಂಧವ್ಯದ ಕಥಾಹಂದರ ಹೊಂದಿರುವ “ಕ್ರಷ್’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
2018ರಲ್ಲಿ ತೆರೆಕಂಡ “ರಂಗ್ ಬಿ ರಂಗಿ’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದ ಪಂಚಾಕ್ಷರಿ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಅಭಿ ಎನ್. ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಟ್ರೇಲರ್ ಬಿಡುಗಡೆಯ ಬಳಿಕ “ಕ್ರಷ್’ ಸಿನಿಮಾದ ಬಗ್ಗೆ ಮಾತನಾಡಿ ನಾಯಕ ನಟ ಪಂಚಾಕ್ಷರಿ, “ಈ ಸಿನಿಮಾದಲ್ಲಿ ಕರ್ಣ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ತಂದೆಯೇ ಸರ್ವಸ್ವ ಎಂದುಕೊಂಡಿರುವ ಹುಡುಗನೊಬ್ಬ ಹುಡುಗಿಯೊಬ್ಬಳ ಜೊತೆ ಹೇಗೆ ಜರ್ನಿ ಮಾಡುತ್ತಾನೆ ಎಂಬುದು ಸಿನಿಮಾದ ಕಥೆಯ ಒಂದು ಎಳೆ. ಸಾಕಷ್ಟು ಪರಿಶ್ರಮ ವಹಿಸಿ ಈ ಸಿನಿಮಾ ಮಾಡಿದ್ದೇವೆ’ ಎಂದರು.
ನಾಯಕಿ ಪ್ರತಿಭಾ ಮಾತನಾಡಿ, “ಈ ಸಿನಿಮಾಕ್ಕೆ ಆಡಿಷನ್ ಮೂಲಕ ಆಯ್ಕೆಯಾಗಿದ್ದೆ. ತುಂಬ ಬೋಲ್ಡ್ ಆಗಿರುವಂಥ ಪಾತ್ರ ನನ್ನದು. ಮನಸ್ಸಿನಲ್ಲಿ ತಾಯಿಯ ಮೇಲೆ ಅಗಾಧವಾಗಿ ಪ್ರೀತಿಯಿರುವ ಹುಡುಗಿಗೆ, ನಾಯಕನ ಮೇಲೆ ಕ್ರಷ್ ಆಗುತ್ತದೆಯಾ? ಇಲ್ಲವಾ? ಎಂಬುದೇ ನನ್ನ ಪಾತ್ರ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
“ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಕ್ರಷ್ ಇರುತ್ತದೆ. ಆ ಕ್ರಷ್ ಅನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ನಿರ್ಮಾಪಕರ ಸಲಹೆಯಂತೆ ಬಹುತೇಕ ಹೊಸಬರನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದ ಕಥೆ ಮಾಡಲು ಜಗ್ಗೇಶ್ ಸ್ಫೂರ್ತಿಯಾಗಿದ್ದಾರೆ. ತಂದೆ-ಮಗ ಮತ್ತು ತಾಯಿ-ಮಗಳ ನಡುವಿನ ಭಾವನಾತ್ಮಕ ಸಂಬಂಧ ಸಿನಿಮಾದ ಮತ್ತೂಂದು ಹೈಲೈಟ್ಸ್’ ಎಂದು ಸಿನಿಮಾದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು ನಿರ್ದೇಶಕ ಅಭಿ.
ನಿರ್ಮಾಪಕ ಎಸ್. ಚಂದ್ರಮೋಹನ್ “ಕ್ರಷ್’ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಐದು ಹಾಡುಗಳಿದ್ದು, ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ ಎಂಬುದು ನಿರ್ಮಾಪಕರ ಭರವಸೆಯ ಮಾತು. ಸದ್ಯ ಈಗಾಗಲೇ ಸೆನ್ಸಾರ್‌ನಲ್ಲಿ “ಯು/ಎ’ ಸರ್ಟಿಫಿಕೆಟ್ ಪಡೆದುಕೊಂಡಿರುವ “ಕ್ರಷ್’ ಸಿನಿಮಾವನ್ನು ಮುಂಬರುವ ಫೆಬ್ರವರಿ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.