ಮನೆ ರಾಜ್ಯ ಮೋದಿ ಪ್ರಧಾನಿ ಆದ್ಮೇಲೆ ಸಾಂವಿಧಾನಿಕ ಸಂಸ್ಥೆಗಳ ಮೌಲ್ಯ ಹಾಳಾಗಿದೆ – ಸಿಎಂ ವಾಗ್ದಾಳಿ

ಮೋದಿ ಪ್ರಧಾನಿ ಆದ್ಮೇಲೆ ಸಾಂವಿಧಾನಿಕ ಸಂಸ್ಥೆಗಳ ಮೌಲ್ಯ ಹಾಳಾಗಿದೆ – ಸಿಎಂ ವಾಗ್ದಾಳಿ

0

ಬೆಂಗಳೂರು : ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆದ ಬಳಿಕ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಮೌಲ್ಯ ಹಾಳಾಗಿದೆ. ಚುನಾವಣಾ ಆಯೋಗ, ಸಿಬಿಐ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರದ ಅಡಿಯಾಳಾಗಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ʻವೋಟ್‌ ಚೋರಿʼ ಅಭಿಯಾನ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದರು. ಬಿಜೆಪಿಯವರು ಕೇವಲ ಸುಳ್ಳಿನಲ್ಲಿ ಮಾತ್ರವಲ್ಲ ಮತಗಳ್ಳತನದಲ್ಲೂ ನಿಸ್ಸೀಮರು ಎನ್ನುವುದು ಸಾಬೀತಾಗಿದೆ. ನಾವು ಇದನ್ನು ಸಹಿಸಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟದ ಮಾರ್ಗ ಹಿಡಿಯುತ್ತೇವೆ.

ಬಿಜೆಪಿ ಮತಗಳ್ಳತನದ ಮೂಲಕ‌ ಅನೇಕ ರಾಜ್ಯಗಳ ವಿಧಾನಸಭೆಗಳಲ್ಲಿ ಮತ್ತು ಲೋಕಸಭೆಯಲ್ಲಿ ಕೂಡ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಅವರು ನಿರಂತರ ಅಧ್ಯಯನ, ತಪಾಸಣೆ ಬಳಿಕ ದಾಖಲೆ ಸಮೇತ ಮತಗಳ್ಳತನವನ್ನ ದೇಶದ ಜನರಿಗೆ ಮನವರಿಕೆ ಮಾಡಿಸಿದ್ದಾರೆ ಎಂದು ತಿಳಿಸಿದರು.

ಸಂವಿಧಾನಬಾಹಿರವಾಗಿ ಅಧಿಕಾರ ಹಿಡಿಯುವುದು ಸಂವಿಧಾನಕ್ಕೆ ಎಸಗುವ ದ್ರೋಹ. ಪ್ರಜಾಪ್ರಭುತ್ವಕ್ಕೆ ಎಸಗಿದ ವಂಚನೆ. ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಡೆದ ಮತಗಳ್ಳತನವನ್ನ ದಾಖಲೆ ಸಮೇತ ಬಯಲಿಗೆ ಎಳೆದು ದೇಶದ ಜನರ ಮುಂದೆ ಇಟ್ಟಿದ್ದಾರೆ. ಇಷ್ಟಾದರೂ ಚುನಾವಣಾ ಆಯೋಗ ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ದೇಶದ ಜನರ ಮುಂದೆ ಇರಿಸಿದ ದಾಖಲೆಗಳಿಗೂ ಉತ್ತರ ನೀಡುತ್ತಿಲ್ಲ ಎಂದು ಆಯೋಗದ ವಿರುದ್ಧ ಅಸಮಾಧಾನ ಹೊರಹಾಕಿದರು.

ಚುನಾವಣಾ ಆಯೋಗಕ್ಕೆ ಸ್ವತಂತ್ರ ಸಂಸ್ಥೆಯ ಸ್ಥಾನಮಾನವನ್ನ ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿದ್ದಾರೆ. ಪ್ರಜಾಪ್ರಭುತ್ವ ಚುನಾವಣಾ ಪ್ರಕ್ರಿಯೆಯಲ್ಲಿ ಮೂಗು ತೂರಿಸಬಾರದು ಎನ್ನುವುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು. ಅದಕ್ಕಾಗಿ ಮುಕ್ತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನ ನಮ್ಮ ಸಂವಿಧಾನವು ರೂಪಿಸಿದೆ.

ಸಂವಿಧಾನದ ಮೌಲ್ಯ ಉಳಿಯಬೇಕಾದ್ರೆ ಸ್ವತಂತ್ರ ಚುನಾವಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದು ಎಲ್ಲಾ ಪಕ್ಷಗಳ ಜವಾಬ್ದಾರಿ. ಆದ್ದರಿಂದ ನಾವು ಸಂವಿಧಾನದ ಮತ್ತು ಪ್ತಜಾಪ್ರಭುತ್ವ ಕಾಪಾಡಲು ಕಾಂಗ್ರೆಸ್ ಪಕ್ಷದಿಂದ ಕೋಟಿಗೂ ಅಧಿಕ ಮಂದಿಯ ಸಹಿ ಸಂಗ್ರಹ ಮಾಡಿದ್ದೇವೆ. ಇದನ್ನ ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿಗಳಿಗೂ ನೀಡಲಾಗುವುದು ಎಂದು ತಿಳಿಸಿದರು.