ಇಂಫಾಲ್ : ಹಿಂದೂ ಸಮುದಾಯ ಅಸ್ತಿತ್ವದಲ್ಲಿಲ್ಲದಿದ್ದರೆ ಜಗತ್ತು ಅಂತ್ಯಗೊಳ್ಳುತ್ತದೆ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಮಣಿಪುರದ ಇಂಫಾಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರೀಸ್, ಈಜಿಪ್ಟ್ ಮತ್ತು ರೋಮ್‌ನಂತಹ ಮಹಾನ್ ನಾಗರಿಕತೆಗಳು ಕಣ್ಮರೆಯಾಗಿವೆ, ಆದರೆ ಭಾರತವು ಅಮರವಾಗಿ ಉಳಿದಿದೆ ಎಂದು ಅವರು ಹೇಳಿದರು. ಹಿಂದೂ ಸಮಾಜವು ಅದರ ಬಲವಾದ ಸಾಂಸ್ಕೃತಿಕ ರಚನೆಯಿಂದಾಗಿ ಭವಿಷ್ಯದಲ್ಲಿ ಉಳಿಯುತ್ತದೆ ಎಂದು ಭಾಗವತ್ ವಿವರಿಸಿದರು.
ನಾವು 1857 ರಿಂದ 1947 ರವರೆಗೆ 90 ವರ್ಷಗಳ ಕಾಲ ಶ್ರಮಿಸಿದ್ದೇವೆ. ನಾವೆಲ್ಲರೂ ಇಷ್ಟು ದಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು. ಆ ಧ್ವನಿಯನ್ನು ಹತ್ತಿಕ್ಕಲು ನಾವು ಎಂದಿಗೂ ಬಿಡಲಿಲ್ಲ. ಕೆಲವೊಮ್ಮೆ ಅದು ಕಡಿಮೆಯಾಗುತ್ತತ್ತ, ಕೆಲವೊಮ್ಮೆ ಹೆಚ್ಚಾಗುತ್ತಿತ್ತು, ಆದರೆ ಎಂದಿಗೂ ನಿಲ್ಲಲಿಲ್ಲ ಎಂದರು. ಮೋಹನ್ ಭಾಗವತ್ ಶುಕ್ರವಾರ ಇಂಫಾಲದಲ್ಲಿ ಬುಡಕಟ್ಟು ನಾಯಕರೊಂದಿಗೆ ಸಭೆ ನಡೆಸಿದರು.
ಈ ಸಭೆಯಲ್ಲಿ, ಅವರು ಸಾಮಾಜಿಕ ಏಕತೆಗೆ ಕರೆ ನೀಡಿದರು ಮತ್ತು ಸಮಾಜವನ್ನು ಬಲಪಡಿಸಲು ತಮ್ಮ ಸಂಘಟನೆ ಸಂಪೂರ್ಣವಾಗಿ ಸಮರ್ಪಿತವಾಗಿದೆ ಎಂದು ಪುನರುಚ್ಚರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾರ ವಿರುದ್ಧವೂ ಅಲ್ಲ. ಅದು ಸಮಾಜವನ್ನು ನಾಶಮಾಡಲು ಅಲ್ಲ, ಅದನ್ನು ಶ್ರೀಮಂತಗೊಳಿಸಲು ರೂಪುಗೊಂಡಿದೆ ಎಂದು ಹೇಳಿದರು.














