ಬೆಳಗಾವಿ: ತಾಲೂಕಿನ ಕಿಣೈ ಗ್ರಾಮದ ಪಾಗಲ್ಪ್ರೇಮಿ ತಿಪ್ಪಣ್ಣ ಡೋಕರೆ (27) ಇದೇ ಗ್ರಾಮದ ಓರ್ವ ಯುವತಿ ಮತ್ತು ಯುವತಿ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ಪ್ರೀತಿಸು, ಮದುವೆ ಆಗುವಂತೆ ತಿಪ್ಪಣ್ಣ ಡೋಕರೆ ಮೂರು ವರ್ಷಗಳಿಂದ ಪೀಡಿಸುತ್ತಿದ್ದನು. ಬಿಕಾಂ ಓದುತ್ತಿರುವ ಯುವತಿ ನಿತ್ಯ ಕಾಲೇಜಿಗೆ ಹೋಗುವಾಗ ಫಾಲೋ ಮಾಡಿ ರೇಗಿಸುತ್ತಿದ್ದನು. ಇನ್ನು ಯುವತಿ ಕಿಣೈ ಗ್ರಾಮದಲ್ಲಿ ತಾಯಿಯ ಜೊತೆಗೆ ವಾಸವಾಗಿದ್ದು, ತಿಪ್ಪಣ್ಣ ಡೋಕರೆ ಕಾಟಕ್ಕೆ ಓದು ನಿಲ್ಲಿಸಿದ್ದಳು.
“ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು” ಎಂದು ಯುವತಿ ತಾಯಿಗೂ ಧಮ್ಕಿ ಹಾಕಿದ್ದನು. ಮದುವೆ ಮಾಡಿಕೊಡದಿದ್ದರೆ ಇಬ್ಬರನ್ನೂ ಕೊಲೆ ಮಾಡುವುದಾಗಿ ತಿಪ್ಪಣ್ಣ ಬೆದರಿಕೆ ಹಾಕಿದ್ದನು. ತಿಪ್ಪಣ್ಣ ಡೋಕರೆ ಯಾವುದೇ ಕೆಲಸ ಮಾಡದೆ ಕುಡಿದು ಊರಲ್ಲಿ ಸುತ್ತಾಡುತ್ತಿದ್ದನು.
ಅಲ್ಲದೆ ಇದೇ ವಿಚಾರಕ್ಕೆ ತಿಪ್ಪಣ್ಣ ಕೆಲ ತಿಂಗಳ ಹಿಂದೆ ಯುವತಿ ಮನೆ ಹಿಂಬಾಗಿಲಿಗೆ ಬೆಂಕಿ ಹಚ್ಚಿದ್ದನು. ತಿಪ್ಪಣ್ಣನ ಕಿರಿಕಿರಿಗೆ ಬೇಸತ್ತು 3 ವರ್ಷಗಳ ಹಿಂದೆಯೇ ಯುವತಿ ಪೊಲೀಸರಿಗೆ ದೂರು ಕೊಟ್ಟಿದ್ದಳು. ಆಗ ತಿಪ್ಪಣ್ಣ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತಿಪ್ಪಣ್ಣನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆಗ ತಿಪ್ಪಣ್ಣ ಯುವತಿ ತಂಟೆಗೆ ಹೋಗದೆ ಸುಮ್ಮನಿದ್ದನು.
ಈಗ ತಿಪ್ಪಣ್ಣ ಹಳೆ ಚಾಳಿ ಮತ್ತೆ ಆರಂಭಿಸಿದ್ದು, ಯುವತಿ ಮನೆ ಮೇಲೆ ಕಲ್ಲು ತೂರಿ ಅಟ್ಟಹಾಸ ಮೆರೆದಿದ್ದಾನೆ. ಇದಕ್ಕೆ ಯುವತಿ ಮತ್ತು ಆಕೆಯ ತಾಯಿ ರಕ್ಷಣೆ ಕೋರಿ ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ.
ಆಯುಕ್ತರ ಸೂಚನೆ ಮೇರೆಗೆ ಯುವತಿ ಮನೆಗೆ ಓರ್ವ ಪೊಲೀಸ್ ಪೇದೆಯನ್ನು ನಿಯೋಜನೆ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.