ಶ್ರೀರಂಗಪಟ್ಟಣ: ಶವ ಸಂಸ್ಕಾರಕ್ಕೆ ಮನೆಯವರೆಲ್ಲರೂ ತೆರಳಿದ ಸಂದರ್ಭದಲ್ಲಿ ಕಳವು ಮಾಡುತ್ತಿದ್ದ ಆರೋಪಿಯನ್ನು ಅರಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ತಾಲ್ಲೂಕು ಅರಳ ಕುಪ್ಪೆ ಮೂಲದ, ಮೈಸೂರು ನಿವಾಸಿ ಶಾಂಬು ಅವರ ಮಗ ವಿವೇಕ್ ಅಲಿಯಾಸ್ ಮನು ಬಂಧಿತ.
ಆತ ತಾಲ್ಲೂಕಿನ ಮಹದೇವಪುರ, ಆರತಿ ಉಕ್ಕಡ, ಪಾಂಡವಪುರ ತಾಲ್ಲೂಕಿನ ಹಿರೇಮರಳಿ, ಚಿನಕುರಳಿ, ಹರವು, ಡಾಮಡಹಳ್ಳಿ, ಮೈಸೂರಿನಲ್ಲಿ ಚಿನ್ನಾಭರಣ ಇತರ ವಸ್ತುಗಳನ್ನು ಕಳವು ಮಾಡಿದ್ದ.
ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ಜ.16ರಂದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ತು ಕಡೆ ಕಳವು ಮಾಡಿರುವುದಾಗಿ ಒಪ್ಪಿಕೊಂಡ. ಆತನಿಂದ ₹30.21 ಲಕ್ಷ ಬೆಲೆಯ 521 ಗ್ರಾಂ ಚಿನ್ನಾಭರಣ, ₹3.5 ಲಕ್ಷ ಬೆಲೆಯ ಕ್ಯಾಮೆರಾ ಮತ್ತು ಲೆನ್ಸ್‌ಗಳು, ₹50 ಸಾವಿರ ಬೆಲೆಯ ಬೈಕ್, ₹2 ಲಕ್ಷ ಬೆಲೆಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ, ಅರಕೆರೆ, ಪಾಂಡವಪುರ, ಕೆಆರ್‌ಎಸ್, ಮೈಸೂರಿನ ವಿವಿ ಪುರಂ ಮತ್ತು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕೆಆರ್‌ಎಸ್ ಸಿಪಿಐ ಟಿ.ಎಂ. ಪುನೀತ್, ಅರಕೆರೆ ಪಿಎಸ್‌ಐ ಎಂ.ಆರ್. ಬ್ಯಾಳಿ, ಸಿಬ್ಬಂದಿಗಳಾದ ನಟರಾಜು,ಕೆ.ಆರ್. ಸತೀಶ್, ನಾಗೇಂದ್ರ, ರಾಜಶೇಖರ್, ಮಲ್ಲೇಶ್, ಶಿವಪ್ರಸಾದ್, ನಂದಗೋಪಿ, ರವೀಶ್, ರವಿ, ಶಿವಕುಮಾರ್ ಅವರನ್ನು ಎಸ್ಪಿ ಎನ್. ಯತೀಶ್ ಅಭಿನಂದಿಸಿದ್ದಾರೆ.