ರಾಯಚೂರು : ಮಂತ್ರಾಲಯದಲ್ಲಿ ಗುರುರಾಯರ ಗುರುವೈಭವೋತ್ಸವ ಸಂಭ್ರಮ ಮನೆ ಮಾಡಿದೆ. ಮಠದ ಅಂಗಳದ ಪುಷ್ಕರಣಿಯಲ್ಲಿ ರಾತ್ರಿ ವೇಳೆ ಅದ್ದೂರಿಯಾಗಿ ತೆಪ್ಪೋತ್ಸವ ನೆರವೇರಿಸಲಾಯಿತು.
ರಾಯರ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ಪುಷ್ಕರಣಿಯಲ್ಲಿ ಉತ್ಸವ ಮೂರ್ತಿ ಪ್ರಹ್ಲಾದರಾಯರ ಮೆರವಣಿಗೆ ಮಾಡಲಾಯಿತು. ಗುರುರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದಿಂದ ಮಂತ್ರಾಲಯ ಕಳೆಕಟ್ಟಿದೆ.
ಬೆಳಿಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಪ್ರವಚನ, ರಥೋತ್ಸವ ನಡೆಯುತ್ತಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಮಠದ ವತಿಯಿಂದ ಸನ್ಮಾನ ಮಾಡಲಾಗುತ್ತಿದೆ. ಫೆ.18 ರಿಂದ 24ರವರೆಗೆ ಏಳುದಿನ ಕಾಲ ನಡೆಯಲಿರುವ ಗುರುವೈಭವೋತ್ಸವದಲ್ಲಿ ಫೆ.24ರಂದು 431ನೇ ರಾಯರ ವರ್ಧಂತಿ ಉತ್ಸವ ನಡೆಯಲಿವೆ.















