ನವದೆಹಲಿ: ಬಜೆಟ್ ಅಧಿವೇಶನ ಶುರುವಾಗಿದೆ. ಜಗತ್ತಿನಲ್ಲಿ ಭಾರತದ ಆರ್ಥಿಕತೆ ಬೆಳಗಲಿದೆ ಎಂಬ ಆಶಾಭಾವವಿದೆ. ಇದಕ್ಕೆ ನಿರ್ಮಲಾ ಸೀತಾರಾಮನ್ ನೀರೆರೆಯಲಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಬಜೆಟ್ ಅಧಿವೇಶನ ಆರಂಭಕ್ಕೂ ಮೊದಲು ಸಂಸತ್ ಕಟ್ಟಡದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಜನರ ಎಲ್ಲ ಆಶಯಗಳನ್ನು ಪೂರೈಸಲು ಪ್ರಯತ್ನಿಸಲಿದ್ದಾರೆ ಎಂದರು.
ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿಯ ನಡುವೆಯೂ ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.
ಬಜೆಟ್ ಅಧಿವೇಶನಕ್ಕೂ ಮೊದಲು ವಿಶ್ವದ ಹಲವು ಸಂಸ್ಥೆಗಳು ಭಾರತದ ಆರ್ಥಿಕತೆಯನ್ನು ಹೊಗಳಿವೆ. ಇದು ಸಕಾರಾತ್ಮಕ ಸಂದೇಶ, ಭರವಸೆಯ ಕಿರಣ ಮತ್ತು ಉತ್ಸಾಹವನ್ನು ಹೆಚ್ಚಿಸಿದೆ ಎಂದರು.
ಸಂಸತ್ತಿನಲ್ಲಿ ರಾಷ್ಟ್ರಪತಿಗಳು ಮಾಡುವ ಮೊದಲ ಭಾಷಣವು ನಮ್ಮ ಸಂವಿಧಾನ ಮತ್ತು ವಿಶೇಷವಾಗಿ ಮಹಿಳೆಯರ ಗೌರವಕ್ಕೆ ಹೆಮ್ಮೆಯ ವಿಷಯವಾಗಿದೆ. ಇಡೀ ಜಗತ್ತು ಭಾರತದತ್ತ ದೃಷ್ಟಿ ನೆಟ್ಟಿದೆ. ಭಾರತ ಮೊದಲು, ಪ್ರಜೆ ಮೊದಲು ಎಂಬ ಚಿಂತನೆಯನ್ನು ತೆಗೆದುಕೊಂಡು ನಾವು ಸಂಸತ್ತಿನ ಈ ಬಜೆಟ್ ಅಧಿವೇಶನವನ್ನು ಶುರು ಮಾಡಲಿದ್ದೇವೆ. ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವುದರ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದು ಪ್ರಧಾನಿ ಹೇಳಿದರು.