ಮನೆ ರಾಜ್ಯ ತಂದೆಯ ಮೇಲೆ ಯಾವ ಆರೋಪವಿಲ್ಲ, ಸೂತ್ರವೇ ರಚನೆಯಾಗಿಲ್ಲ – ಯತೀಂದ್ರ

ತಂದೆಯ ಮೇಲೆ ಯಾವ ಆರೋಪವಿಲ್ಲ, ಸೂತ್ರವೇ ರಚನೆಯಾಗಿಲ್ಲ – ಯತೀಂದ್ರ

0

ಮೈಸೂರು : ಸಿಎಂ ಸಿದ್ದರಾಮಯ್ಯ ಅವರ ಮೇಲೆ ಯಾವ ಆರೋಪವೂ ಇಲ್ಲ. ಅವರನ್ನು ಕೆಳಗಿಳಿಸಲು ಯಾವ ಕಾರಣಗಳು ಇಲ್ಲ. ಇನ್ನೂ ಎರಡೂವರೆ ವರ್ಷ ನನ್ನ ತಂದೆಯೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ, ಸಿಎಂ ಸಿದ್ದರಾಮಯ್ಯನವರು ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ಬರಬಾರದಿತ್ತು. ಆದರೂ ಯಾರೋ ಕೆಲವರು ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಹೈಕಮಾಂಡ್ ಎಲ್ಲೂ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.

ನನಗೆ ಇರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲಿ ಕೆ ಲ ಹಿರಿಯ ಸಚಿವರಾಗಲಿ ಈ ಬಗ್ಗೆ ಯಾವತ್ತು ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ ಎಂದು ಅರ್ಥ ತಾನೇ? ಯಾರಿಗೆ ಎಷ್ಟು ಶಾಸಕರ ಬೆಂಬಲ ಇದೆ ಎನ್ನುವ ಅಂತಹ ಚರ್ಚೆ ಮಾಡುವುದು ಬೇಡ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಮತ್ತೆ ಮತ್ತೆ ಆ ಅಂಕಿ ಸಂಖ್ಯೆ ಕೇಳಬೇಡಿ. ಎಲ್ಲಾ ಶಾಸಕರ ಬೆಂಬಲ ನನ್ನ ತಂದೆಗೆ ಇದೆ ಎಂದರು.

ಯಾರನ್ನು ಸಿಎಂ ಮಾಡಬೇಕು, ಯಾರನ್ನು ಮಾಡಬಾರದು ಎನ್ನುವುದು ನಮ್ಮ ಶಾಸಕರಿಗೆ ಮತ್ತು ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದರ ಬಗ್ಗೆ ಬೇರೆಯವರ ಅಭಿಪ್ರಾಯ ಅನಗತ್ಯ ಎಂದು ಹೇಳುವ ಮೂಲಕ ಡಿಕೆಶಿ ಪರ ಬ್ಯಾಟ್‌ ಬೀಸಿದ್ದ ಆದಿಚುಂಚನಗಿರಿ ಮಠದ ಸ್ವಾಮೀಜಿಗೆ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದರು.