ಬೆಂಗಳೂರು: ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದು, ಈ ವರ್ಷ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಈ ವರ್ಷದ ಪಠ್ಯದಲ್ಲಿ ಭಗವದ್ಗೀತೆಯನ್ನ ಪರಿಚಯಿಸಲ್ಲ. ರಾಜ್ಯದ ಪಠ್ಯಪುಸ್ತಕದಲ್ಲಿ ಈ ವರ್ಷ ಭಗವದ್ಗೀತೆ ಸೇರಿಸಲ್ಲ. ಈ ವರ್ಷದ ಪಠ್ಯ ಈಗಾಗಲೇ ನಿರ್ಧಾರವಾಗಿದೆ. ಮಾರಲ್ ಸೈನ್ಸ್ ತರುವಂತೆ ಹಲವರು ಬೇಡಿಕೆ ಇಟ್ಟಿದ್ದಾರೆ. ಇಂತಹ ಬೇಡಿಕೆ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.
ಗುಜರಾತ್ ಮಾದರಿ ಎಂಬುದು ನನಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಸಂಸ್ಕಾರ ಕಲಿಸಬೇಕಿದೆ. ಅದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.