ಮನೆ ರಾಜಕೀಯ ಭಯೋತ್ಪಾದಕರಿಗೂ ಎಂಇಎಸ್‌ ಹಾಗೂ ಶಿವಸೇನೆಯ ಕಾರ್ಯಕರ್ತರಿಗೂ ವ್ಯತ್ಯಾಸವಿಲ್ಲ: ನಾರಾಯಣ ಗೌಡ ಕಿಡಿ

ಭಯೋತ್ಪಾದಕರಿಗೂ ಎಂಇಎಸ್‌ ಹಾಗೂ ಶಿವಸೇನೆಯ ಕಾರ್ಯಕರ್ತರಿಗೂ ವ್ಯತ್ಯಾಸವಿಲ್ಲ: ನಾರಾಯಣ ಗೌಡ ಕಿಡಿ

0

ಬೆಳಗಾವಿ: ಪಾಕಿಸ್ತಾನದ ಭಯೋತ್ಪಾದಕರಿಗೂ ಎಂಇಎಸ್‌ ಹಾಗೂ ಶಿವಸೇನೆಯ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸವಿಲ್ಲ. ಇವರ ವರ್ತನೆಗಳು ಅಷ್ಟು ಕ್ರೂರವಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಕಿಡಿಕಾರಿದರು.

Join Our Whatsapp Group

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮಾಯಕ ಬಸ್‌ ಚಾಲಕ, ನಿರ್ವಾಹಕರನ್ನು ಹೊಡೆಯುತ್ತಾರೆ. ಅವರ ಮುಖಕ್ಕೆ ಮಸಿ ಬಳಿದು ಬೆದರಿಕೆ ಹಾಕಿ ಜೈ ಮಹಾರಾಷ್ಟ್ರ ಎಂದು ಹೇಳಿಸಿದ್ದಾರೆ. ಇದು ಭಯೋತ್ಪಾದಕರು ಮಾಡುವಂಥ ಕೃತ್ಯ ಎಂದರು.

‘ಕನ್ನಡಿಗರನ್ನು ಕೆಣಕಿದವರನ್ನು ಸುಮ್ಮನೇ ಬಿಡುವುದಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿರುವ ಎಲ್ಲ  ಮರಾಠಿಗರೂ ಜೈ ಕರ್ನಾಟಕ ಎಂದು ಹೇಳಲೇಬೇಕಾದ ದಿನಗಳು ಬರುತ್ತವೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಈಗ ಬೆಳಗಾವಿಯಲ್ಲಿ ಸಂಪೂರ್ಣ ನಾಶವಾಗಿದೆ. ಯಾರೂ ದಿಕ್ಕಿಲ್ಲ. ಆ ಹೊಟ್ಟೆಕಿಚ್ಚಿನಿಂದ ಈ ರೀತಿ ಹಲ್ಲೆ, ದಾಳಿಗಳನ್ನು ಮುಂದುವರಿಸಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ನೀಡಿಯೇ ತೀರುತ್ತೇವೆ ಎಂದೂ ಹೇಳಿದರು.

ಜಿಲ್ಲಾಧಿಕಾರಿ ವಿರುದ್ಧ ಕಿಡಿ

ಮರಾಠಿಗರಿಗೆ ಮರಾಠಿ ಭಾಷೆಯಲ್ಲೇ ದಾಖಲೆ ನೀಡುತ್ತೇನೆ ಎಂದು ಹೇಳಿದ ಜಿಲ್ಲಾಧಿಕಾರಿ ನಡೆ ಖಂಡನೀಯ. ಹೊರ ರಾಜ್ಯದಿಂದ ಬಂದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಮಾಡಬೇಡಿ. ಮರಾಠಿಗರನ್ನು ಓಲೈಕೆ ಮಾಡಲು ಮುಂದಾದರೆ ಹೋರಾಟ ಎದುರಿಸಬೇಕಾಗುತ್ತದೆ. ಗಡಿ ವಿವಾದ ಇನ್ನೂ ಸುಪ್ರೀಂಕೋರ್ಟ್‌ನಲ್ಲಿದೆ. ಇಂಥ ಸಂದರ್ಭದಲ್ಲಿಯೂ ಮರಾಠಿಗರ ಮನವಿಗೆ ಸ್ಪಂದಿಸಿ ಮರಾಠಿ ಭಾಷೆಯಲ್ಲೂ ದಾಖಲೆ ಕೊಡಲಾಗುವುದು ಎಂದು ಹೇಳಲು ನೀವು ಯಾರು? ಸರಿಯಾಗಿ ಕೆಲಸ ಮಾಡಲು ಆಗದಿದ್ದರೆ ಬಿಟ್ಟು ತೊಲಗಿ. ಕನ್ನಡಿಗರ ಭವಿಷ್ಯಕ್ಕೆ ತೊಂದರೆ ಆಗುವಂಥ ಹೆಜ್ಜೆ ಇಡಬೇಡಿ ಎಂದೂ ಅವರು ಆಗ್ರಹಿಸಿದರು.