ಕೊಪ್ಪಳ: ಕಾಂಗ್ರೆಸ್ ಸರಕಾರದಲ್ಲಿ ನಾಯಕತ್ವ ಗೊಂದಲವಿಲ್ಲ. ಇದು ಮಾಧ್ಯಮಗಳ ಸೃಷ್ಠಿಯಷ್ಟೇ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ. ಹೀಗಾಗಿ ಆ ಚರ್ಚೆ ಅನಗತ್ಯ. ಈ ರೀತಿ ಚರ್ಚೆ ಪಕ್ಷದ ಘನತೆ ಹಾಗು ಬಲ ಕುಂದುತ್ತದೆ. ಹೈಕಮಾಂಡ್ ಮಾಡುವ ನಿರ್ಧಾರಕ್ಕೆ ನಾವು ಚರ್ಚಿಸಬಾರದು ಎಂದರು.
ಸಚಿವರಿಗೆ ಸಿಎಂ ಮನೆಯಲ್ಲಿ ಉಪಹಾರಕ್ಕೆ ಆಹ್ವಾನದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಕುರಿತು ನನಗೆ ಆಹ್ವಾನವಿಲ್ಲ. ನಾನು ಅಲ್ಲಿ ಇಲ್ಲದೆ ಇರುವದರಿಂದ ಭಾಗವಹಿಸಲು ಆಗುವುದಿಲ್ಲ ಎಂದರು.
ಸಿಎಂ ಆಗುವುದಕ್ಕೆ ನೀವು ರೇಸ್ ನಲ್ಲಿ ನೀವು ಇದ್ದಿರಾ ಪ್ರಶ್ನೆಗೆ ಉತ್ತರಿಸಿ, ಜನರ ಬೆಂಬಲ ಹಾಗು ಹೈಕಮಾಂಡ್ ಆಶೀರ್ವಾದ ಮುಖ್ಯ. ಸಿಎಂ ಹುದ್ದೆ ಕೇಳಿ ಪಡೆಯುವುದಲ್ಲ, ಆ ಎತ್ತರಕ್ಕೆ ಬೆಳೆಯಬೇಕು ಎಂದರು.
ನ್ಯಾಯದಾನಕ್ಕೆ ಬಲ ತುಂಬಲು ನಮ್ಮ ಸರಕಾರ ಬದ್ದ. ಜನವರಿ 26 ರ ವೇಳೆಗೆ ರಾಜ್ಯದಲ್ಲಿ ಗ್ರಾಮ ನ್ಯಾಯಲಯ ಸ್ಥಾಪನೆಗೆ ಸಿದ್ದತೆ ಮಾಡಲಾಗಿದೆ. ಮುಖ್ಯ ನ್ಯಾಯಾಧೀಶರೊಂದಿಗೆ ಚರ್ಚಿಸಿ ಅಂತಿಮ ರೂಪರೇಷ ನೀಡಲಾಗುವುದು. ನ್ಯಾಯಲಯಗಳಿಗೆ ಮೂಲಭೂತ ಸೌಲಭ್ಯ ನೀಡಲು ಆದ್ಯತೆ ಕಲ್ಪಿಸಲಾಗುವುದು ಎಂದು ಎಚ್ ಕೆ ಪಾಟೀಲ್ ಹೇಳಿದರು.