ಮನೆ ಅಪರಾಧ ‘ಚಿತ್ರದುರ್ಗದಲ್ಲಿ ರಕ್ಷಣೆ ಇಲ್ಲ, ಅಲ್ಲಿಗೆ ತೆರಳಲಾರೆ’: ಮುರುಘಾ ಶರಣರ ಎರಡನೇ ಪ್ರಕರಣದ ಸಂತ್ರಸ್ತೆ ತಾಯಿ

‘ಚಿತ್ರದುರ್ಗದಲ್ಲಿ ರಕ್ಷಣೆ ಇಲ್ಲ, ಅಲ್ಲಿಗೆ ತೆರಳಲಾರೆ’: ಮುರುಘಾ ಶರಣರ ಎರಡನೇ ಪ್ರಕರಣದ ಸಂತ್ರಸ್ತೆ ತಾಯಿ

0

ಮೈಸೂರು(Mysore): ‘ಚಿತ್ರದುರ್ಗದಲ್ಲಿ ರಕ್ಷಣೆ ಇಲ್ಲದಿರುವುದರಿಂದ ಅಲ್ಲಿಗೆ ತೆರಳಲಾರೆ’ ಎಂದು ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಎರಡನೇ ಪೋಕ್ಸೊ ಪ್ರಕರಣದ ಸಂತ್ರಸ್ತೆ ತಾಯಿ ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂತ್ರಸ್ತೆ ತಾಯಿ ತಾತ್ಕಾಲಿಕ ಉದ್ಯೋಗದ ಭರವಸೆ ನೀಡಿದೆ. ಆದರೆ ಅವರು ರಕ್ಷಣೆಯ ಕಾರಣ ನೀಡಿದ್ದು, ಈಗ ವಾಸ್ತವ್ಯವಿರುವ ಒಡನಾಡಿ ಸೇವಾ ಸಂಸ್ಥೆಯಲ್ಲೇ ಉಳಿಯುವುದಾಗಿಯೂ ಪ್ರತಿಪಾದಿಸಿದ್ದಾರೆ.

ಡಿ.12ರಂದು ಸಮಿತಿಗೆ ಪತ್ರ ಬರೆದಿರುವ ಇಲಾಖೆಯ ಚಿತ್ರದುರ್ಗದ ಉಪನಿರ್ದೇಶಕರು, ಸಂತ್ರಸ್ತೆ ತಾಯಿಯ ಮನವಿ ಮೇರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅವರ ಮಕ್ಕಳಿಗೆ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಿದೆ. ತಾಯಿಗೆ ಹೊರಗುತ್ತಿಗೆ ಕೆಲಸವನ್ನೂ ನೀಡಲಿದೆ.

ಈ ಬಗ್ಗೆ, ಸಂಸ್ಥೆಯಲ್ಲಿರುವ ತಾಯಿ, ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೋರಿತ್ತು.

ಅದರ ಅನ್ವಯ ಗುರುವಾರ ಸಂಸ್ಥೆಗೆ ತೆರಳಿದ ಸಮಿತಿಯೊಂದಿಗೆ ಮಾತನಾಡಿದ ತಾಯಿಯು, ‘ಚಿತ್ರದುರ್ಗದಲ್ಲಿ ರಕ್ಷಣೆ ಇಲ್ಲ. ಹೀಗಾಗಿ ಅಲ್ಲಿಗೆ ಹೋಗಲಾರೆ. ಮಕ್ಕಳಿಗೆ ಶಾಲೆ ಮತ್ತು ತನಗೆ ಉದ್ಯೋಗ ದೊರಕಿಸಬೇಕೆಂದು ಮನವಿ ಮಾಡಿದ್ದು ಆಗಸ್ಟ್‌’ನಲ್ಲಿ. ಆಗ ಚಿತ್ರದುರ್ಗ ಜಿಲ್ಲಾಡಳಿತ ಸ್ಪಂದಿಸಲಿಲ್ಲ. ಈಗ ಒಡನಾಡಿಯೇ ಮಕ್ಕಳನ್ನು ಶಾಲೆಗೆ ಸೇರಿಸಿದೆ. ಇಲ್ಲಿ ಭದ್ರತೆಯೂ ಇರುವುದರಿಂದ ಹೋಗಲಾರೆ ಎಂದು ತಿಳಿಸಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ವಿಚಾರಣೆ ನೆಪದಲ್ಲಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದ ಪೊಲೀಸರು ಪರೋಕ್ಷವಾಗಿ ದೂರನ್ನು ವಾಪಸು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಆತಂಕ, ಅಭದ್ರತೆಯ ಕಾರಣಕ್ಕೆ ಮೂರು ದಿನ ಉಪವಾಸವನ್ನೂ ಮಾಡಿದ್ದೆ. ನಂತರ ಒಡನಾಡಿ ಸಂಸ್ಥೆಯವರ ಮೂಲಕವೇ ನನ್ನನ್ನು ಮೈಸೂರಿಗೆ ಕಳುಹಿಸಿಕೊಟ್ಟರು ಎಂದೂ ಸಮಿತಿಗೆ ತಿಳಿಸಿದ್ದಾರೆಂದು ಗೊತ್ತಾಗಿದೆ. ತಾಯಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಸಮಿತಿಯು ಚಿತ್ರದುರ್ಗದ ಮಕ್ಕಳ ರಕ್ಷಣಾ ಘಟಕಕ್ಕೆ ಅದನ್ನು ಕಳಿಸಲು ಸಿದ್ಧತೆ ನಡೆಸಿದೆ.

ಈ ನಡುವೆ, ತಾಯಿಯು ಮೈಸೂರಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ಶುಕ್ರವಾರ ಪತ್ರ ಬರೆದಿದ್ದು, ಒಡನಾಡಿ ಸಂಸ್ಥೆಯಲ್ಲೇ ಉಳಿದುಕೊಳ್ಳಲು ಅವಕಾಶ ನೀಡಬೇಕು. ಕಾಯಂ ಉದ್ಯೋಗದ ಜೊತೆಗೆ ಚಿತ್ರದುರ್ಗದಲ್ಲಿ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದೂ ಕೋರಿದ್ದಾರೆ.

ಹಿಂದಿನ ಲೇಖನ2023ರ ಮೇ  7ರಂದು ‘ನೀಟ್‌’, ಮೇ 21 ರಿಂದ ಸಿಯುಇಟಿ ಪರೀಕ್ಷೆ
ಮುಂದಿನ ಲೇಖನಬಹುರೂಪಿ ರಾಷ್ಟ್ರೀಯ ರಂಗೋತ್ಸವ ಯಶಸ್ವಿ: ಅಡ್ಡಂಡ ಸಿ.ಕಾರ್ಯಪ್ಪ