ಮೈಸೂರು(Mysuru): ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ಸರಸ್ವತಿ ಸಮ್ಮಾನ್, ಸಾಹಿತಿ ಎಸ್.ಎಲ್.ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಇಂದು ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಅವರು, ಇಂದಿರಾಗಾಂಧಿ ಕಾಲದಲ್ಲಿ ಪಠ್ಯ ಪುಸ್ತಕ ಪರಿಷ್ಕರಿಸುವಾಗ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಆಗಲೂ ಅವರಿಗೆ ಬೇಕಾದವರನ್ನು ಸೇರಿಸಿಕೊಂಡು ಪಠ್ಯ ರಚನೆ ಮಾಡಿದ್ದರು. ಅಂದಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಪಠ್ಯವನ್ನು ಒಪ್ಪಿ ಅಳವಡಿಸಿಕೊಂಡರು ಎಂದು ಮಾಹಿತಿ ನೀಡಿದರು.
ನಾನು ಲೇಖಕ, ಕಾರ್ಯಕರ್ತ ಅಲ್ಲ. ವಾಜಪೇಯಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದ ಸಂದರ್ಭದಲ್ಲಿ ಸಾಹಿತಿಗಳು ದೇಶದ ತುಂಬೆಲ್ಲ “ಪ್ರಶಸ್ತಿ ವಾಪ್ಸಿ” ಚಳವಳಿ ಶುರು ಮಾಡಿದರು. ಪ್ರಶಸ್ತಿ ಜತೆಗೆ ಹಣವನ್ನೂ ವಾಪಸ್ ಕೊಡಿ ಅಂತ ನಾನು ಸಲಹೆ ಕೊಟ್ಟಿದ್ದೆ. 15 ದಿನಗಳಲ್ಲಿ ಎಲ್ಲರೂ ಸುಮ್ಮನಾಗಿದ್ದರು ಎಂದು ಹೇಳಿದರು.
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲಾ ಮಾಡಿದ ಅನ್ನೋದು ಕಾರ್ಯಪ್ಪಗೆ ಗೊತ್ತು. ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು. ಸ್ವಲ್ಪದಿನಗಳ ನಂತರ ಎಲ್ಲರೂ ಸುಮ್ಮನಾದರು. ನಾಟಕ ಇರೋದು ಚಳವಳಿ ಮಾಡೋಕೆ. ಕಾವ್ಯ, ಕಾದಂಬರಿ ಹೇಗೆ ರಸಾನುಭವವೋ ಹಾಗೆಯೇ ನಾಟಕ ಕೂಡ ರಸಾನುಭವ. ಅಡ್ಡಂಡ ಕಾರ್ಯಪ್ಪ ತೆಗೆದು ಹಾಕಲು ಚಳವಳಿ ಮಾಡಿದವರಿಗೆ ಆಗಲಿಲ್ಲ ಎಂದು ಹೇಳಿದರು.
ಶಿಕ್ಷಣ ಸಚಿವ ಬಿಸಿ ನಾಗೇಶ್ ಮನೆ ಮೇಲೆ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು. ಸಚಿವ ನಾಗೇಶ್ ಮನೆ ಸುಟ್ಟು ಹಾಕಲು ಹೋಗಿದ್ದರು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ.? ಎಂದು ಪ್ರಶ್ನಿಸಿದರು.
ಟಿಪ್ಪು ಒಡೆದ ದೇವಸ್ಥಾನದ ಬಗ್ಗೆ ಮಾತನಾಡಿದರೆ ಕೋಮುವಾದಿ ಅನ್ನುತ್ತಾರೆ. ಪಠ್ಯದಲ್ಲಿ ಸತ್ಯವನ್ನು ಹೇಳಲು ಆಗುತ್ತಿಲ್ಲ. ಬದಲಾವಣೆ ಮಾಡಲು ಹೋದರೆ ಗಲಾಟೆ ಮಾಡುತ್ತಾರೆ. ಸರ್ಕಾರದ ಮೇಲೆ ಒತ್ತಡ ಇದ್ದೇ ಇರುತ್ತಾರೆ ಎಂದು ಸಾಹಿತಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.