ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಂಗೇರಿದೆ. ಈಗಾಗಲೇ 10 ತಂಡಗಳು ತಲಾ ಒಂದೊಂದು ಪಂದ್ಯವಾಡಿದ್ದು, ಎಲ್ಲಾ ಪಂದ್ಯಗಳಲ್ಲೂ ಭರ್ಜರಿ ಪೈಪೋಟಿ ಕಂಡು ಬಂದಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಈ ಸಲ ಪ್ಲೇಆಫ್ ಹಂತಕ್ಕೇರಲಿರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.
ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಉತ್ತಪ್ಪ, ಈ ಸಲ ರಾಜಸ್ಥಾನ್ ರಾಯಲ್ಸ್ ತಂಡ ಕಪ್ ಗೆಲ್ಲುವ ನಿರೀಕ್ಷೆಯಿದೆ ಎಂದಿದ್ದಾರೆ. ಏಕೆಂದರೆ ಸಂಜು ಸ್ಯಾಮ್ಸನ್ ನೇತತ್ವದ ರಾಯಲ್ಸ್ ಪಡೆ ಕಳೆದ ಕೆಲ ಸೀಸನ್ ಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಹಂತಕ್ಕೇರುವುದು ಖಚಿತ. ಅಲ್ಲದೆ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಪ್ಲೇಆಫ್ ಹಂತಕ್ಕೇರುವ 2ನೇ ತಂಡವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಸಿಎಸ್ ಕೆ ತಂಡದ ನಾಯಕ ಬದಲಾದರೂ ರುತುರಾಜ್ ಗಾಯಕ್ವಾಡ್ಗೆ ಮಹೇಂದ್ರ ಸಿಂಗ್ ಧೋನಿಯ ಬೆಂಬಲ ಸಿಗಲಿದೆ. ಹೀಗಾಗಿ ಸಿಎಸ್ಕೆ ತಂಡವನ್ನು ಕೂಡ ಪ್ಲೇಆಫ್ ಹಂತದಲ್ಲಿ ಎದುರು ನೋಡಬಹುದು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಪ್ಲೇಆಫ್ ಹಂತಕ್ಕೇರಲಿದೆ. ಏಕೆಂದರೆ ಆರ್ಸಿಬಿ ತಂಡವು ಬಲಿಷ್ಠ ದಾಂಡಿಗರ ಬಳಗವನ್ನೇ ಹೊಂದಿದ್ದು, ಈ ಆಟಗಾರರು ಫಾರ್ಮ್ ಪ್ರದರ್ಶಿಸಿ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಹಾಗೆಯೇ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ಪ್ಲೇಆಫ್ ಪ್ರವೇಶಿಸಲಿದೆ. ಏಕೆಂದರೆ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಸತತ 2 ಬಾರಿ ಫೈನಲ್ ಆಡಿದೆ. ಹೀಗಾಗಿ ಬಲಿಷ್ಠ ಮುಂಬೈ ಪಡೆಯನ್ನು ಸಹ ಅವರು ಪ್ಲೇಆಫ್ ಗೆ ಕೊಂಡೊಯ್ಯುವುದರಲ್ಲಿ ಅನುಮಾನ ಬೇಡ ಎಂದಿದ್ದಾರೆ ರಾಬಿನ್ ಉತ್ತಪ್ಪ.
ರಾಬಿನ್ ಉತ್ತಪ್ಪ ಅವರ ಹೇಳಿಕೆಯಂತೆ, ಈ ಸಲ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶಿಸಲಿದೆ. ಅದರಂತೆ ಈ ನಾಲ್ಕು ತಂಡಗಳು ಈ ಬಾರಿ ನಾಕೌಟ್ ಪಂದ್ಯಗಳನ್ನಾಡಲಿದೆಯಾ? ರಾಬಿನ್ ಉತ್ತಪ್ಪ ಅವರ ಭವಿಷ್ಯವು ನಿಜವಾಗಲಿದೆಯಾ ಕಾದು ನೋಡಬೇಕಿದೆ.