ಗಂಗಾವತಿ (ಕೊಪ್ಪಳ): ಆಟೋ ಚಾಲಕರೊಬ್ಬರು ತನ್ನ ಮಗಳ ಮದುವೆಗೆಂದು ಕೂಡಿಟ್ಟಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ಹಾಡಹಗಲೇ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿಯ ಆರ್ಹಾಳ್ ಗ್ರಾಮದಲ್ಲಿ ನಡೆದಿದೆ.
ಆಟೋ ಚಾಲಕ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ವಿರೇಶ ಅಡಿವೆಪ್ಪ ಪಟ್ಟಣಶೆಟ್ಟಿ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ವಿರೇಶ ಅವರ ಮನೆಯಲ್ಲಿದ್ದ ಹತ್ತುವರೆ ತೊಲೆ ಚಿನ್ನಾಭರಣ ಮತ್ತು 2.25 ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು 5.60 ಲಕ್ಷ ಮೌಲ್ಯದ ನಗ-ನಾಣ್ಯ ಕದ್ದು ಪರಾರಿಯಾಗಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ: ಆಟೋ ಬಾಡಿಗೆಗಾಗಿ ವಿರೇಶ ಗಂಗಾವತಿಗೆ ಬಂದಿದ್ದರು. ಮನೆಗೆ ಬೀಗ ಹಾಕಿ ಅವರ ಪತ್ನಿ ರುದ್ರಮ್ಮ ಹಾಗೂ ಪುತ್ರಿ ಐಶ್ವರ್ಯ, ಮನೆಗೆ ಬೀಗ ಹಾಕಿ ಅದೇ ಗ್ರಾಮದ ರೈತರೊಬ್ಬರ ಹೊಲಕ್ಕೆ ಕಳೆ ತೆಗೆಯಲು ಹೋಗಿದ್ದ ವೇಳೆ ಮನೆಯಲ್ಲಿ ಕಳ್ಳತನ ನಡೆದಿದೆ.
ರುದ್ರಮ್ಮ, ಐಶ್ವರ್ಯ ಕೂಲಿ ಮುಗಿಸಿ ವಾಪಾಸ್ ಮನೆಗೆ ಬಂದಾಗ ಬೀಗ ಮುರಿದಿರುವುದು ಗಮನಿಸಿ ಒಳಗೆ ಹೋಗಿ ನೋಡಿದ್ದಾರೆ. ಬಂಗಾರ, ನಗದು ಹಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ 12 ರಿಂದ 4 ಗಂಟೆಯೊಳಗೆ ಕಳ್ಳರು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಬೆರಳಚ್ಚು ತಜ್ಞರು, ಶ್ವಾನ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.













