ಬೆಂಗಳೂರು: ಪಕ್ಷಕ್ಕೆ ಯಾರನ್ನೇ ಕರೆತರುವಾಗ ಅವರ ಪೂರ್ವಾಪರ ವಿಚಾರಿಸಿ ಅವರು ನಮ್ಮ ಪಕ್ಷಕ್ಕೆ ಯೋಗ್ಯರೇ ಎಂಬುದನ್ನು ಯೋಚಿಸಿ ಕರೆತರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೀಗೆ ಬಂದ್ರು ಹಾಗೆ ಹೋದ್ರು ಅಂತಾಗಬಾರದು. ಯಾರನ್ನೇ ಪಕ್ಷಕ್ಕೆ ಕರೆತರುವಾಗ ಯೋಚಿಸಿ, ಯೋಗ್ಯವಾದವರನ್ನು ಕರೆತರಬೇಕು ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಯಾವೊಂದು ಸಣ್ಣ ವಸ್ತು ಖರೀದಿಸುವಾಗಲೂ ಅದರ ಗುಣಮಟ್ಟ ಎಂತಹದ್ದು ಎನ್ನುವುದು ಸೇರಿದಂತೆ ಅಳೆದು-ತೂಗಿ ಖರೀದಿಸುತ್ತೇವೆ. ಅದೇ ರೀತಿ, ಪಕ್ಷಕ್ಕೆ ಯಾರನ್ನಾದರೂ ಕರೆತರುವಾಗ, ಅವರ ಹಿನ್ನೆಲೆ, ನಂಬಿರುವ ಸಿದ್ಧಾಂತಗಳನ್ನು ನೋಡಿಕೊಂಡು ಕರೆತರಬೇಕು ಎಂದು ಹೇಳಿದರು. ಸುಮ್ನೆ ಹಾಗೆ ಬಂದ್ರು, ಹೀಗೆ ಹೋದ್ರು ಅಂತ ಆಗಬಾರದು ಎಂದು ಜಗದೀಶ ಶೆಟ್ಟರ್ ಹೆಸರು ಪ್ರಸ್ತಾಪಿಸದೆ ತೀಕ್ಷ್ಣವಾಗಿ ಹೇಳಿದರು.















