ಮನೆ ಸುದ್ದಿ ಜಾಲ ಮೇ 19ರಿಂದ 22ರವರೆಗೆ ಮೂರನೇ ಆವೃತ್ತಿಯ ‘ಟೆಕ್‌ ಭಾರತ್–2022’

ಮೇ 19ರಿಂದ 22ರವರೆಗೆ ಮೂರನೇ ಆವೃತ್ತಿಯ ‘ಟೆಕ್‌ ಭಾರತ್–2022’

0

ಮೈಸೂರು(Mysuru): ಕೃಷಿ ಉತ್ಪ‍ನ್ನಗಳ ಆಧಾರಿತ ನವೋದ್ಯಮಗಳ ಸ್ಥಾಪಿಸುವವರಿಗಾಗಿ ಇಲ್ಲಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಆವರಣದಲ್ಲಿ ಮೇ 19ರಿಂದ 22ರವರೆಗೆ ಮೂರನೇ ಆವೃತ್ತಿಯ ‘ಟೆಕ್‌ ಭಾರತ್–2022’ ಆಯೋಜಿಸಲಾಗಿದೆ.

‘ಲಘು ಉದ್ಯೋಗ ಭಾರತಿ– ಕರ್ನಾಟಕ, ಐಎಂಎಸ್‌ ಫೌಂಡೇಶನ್‌ ವತಿಯಿಂದ ಸಿಎಸ್‌ಐಆರ್‌– ಸಿಎಫ್‌ಟಿಆರ್‌ಐ ಸಹಯೋಗದಲ್ಲಿ ನಡೆಯಲಿರುವ ತಂತ್ರಜ್ಞಾನ ವಸ್ತುಪ್ರದರ್ಶನ ಮತ್ತು ಸಮಾವೇಶವನ್ನು ಮೇ 19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಲಘು ಉದ್ಯೋಗ ಭಾರತಿಯ ಕಾರ್ಯದರ್ಶಿ ಸಿ.ಎನ್‌.ಭೋಜರಾಜ್‌ ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬೆಳಗಾವಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಕಾರ್ಯಕ್ರಮ ಯಶಸ್ವಿಯಾಗಿವೆ. ಇದೀಗ ಸಿಎಫ್‌ಟಿಆರ್‌ಐನಲ್ಲಿ ನಡೆಯುವ ಮುಖ್ಯ ಸಮಾವೇಶಕ್ಕೆ ದೇಶದ ಕೃಷಿ, ಆಹಾರ ತಂತ್ರಜ್ಞಾನ ಮುಂಚೂಣಿ ಕಂಪನಿಗಳು ಭಾಗವಹಿಸಲಿವೆ’ ಎಂದರು.

‘19ರಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಕೈಲಾಶ್‌ ಚೌಧರಿ, ಪಶುಪತಿ ಕುಮಾರ್‌ ಪಾರಸ್‌, ಸಂಸದ ಪ್ರತಾಪಸಿಂಹ, ಇನ್ಫೊಸಿಸ್‌ ಮಾಜಿ ಸಿಇಒ ಕ್ರಿಸ್‌ ಗೋಪಾಲಕೃಷ್ಣನ್ ಪಾಲ್ಗೊಳ್ಳಲಿದ್ದು, 20ರ ಕಾರ್ಯಕ್ರಮದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್‌, ನಬಾರ್ಡ್‌ ಮುಖ್ಯಸ್ಥರಾದ ಡಾ.ಜಿ.ಆರ್‌.ಚಿಂತಲಾ, ಸಚಿವ ಸಿ.ಎನ್.ಅಶ್ವತ್ಥ ನಾರಾಯಣ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೂರು ದಿನಗಳ ಸಮಾವೇಶದಲ್ಲಿ ಹವಾಮಾನ ವೈಪರೀತ್ಯದ ನಡುವೆ ಸುಸ್ಥಿರ ಕೃಷಿ ಆರ್ಥಿಕತೆಯ ಅಭಿವೃದ್ಧಿ, ಆಹಾರ ತಂತ್ರಜ್ಞಾನಗಳ ಬಳಕೆ, ಆಹಾರ ಸಂರಕ್ಷಣೆ, ಮಹಿಳೆಯರ ಸಬಲೀಕರಣಕ್ಕೆ ಆಹಾರೋದ್ಯಮಗಳ ಸ್ಥಾಪನೆ, ಉದ್ಯಮ ಮತ್ತು ಮಾರುಕಟ್ಟೆ ವಿಸ್ತರಣೆ, ರಫ್ತು ಹೆಚ್ಚಳ, ಕೃಷಿ ಸವಾಲುಗಳು ಮತ್ತು ಪರಿಹಾರದ ಕುರಿತು ವಿಚಾರ ಸಂಕಿರಣಗಳು ಇರಲಿವೆ ಎಂದರು.

ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯವಾಗಿದ್ದು, ಇದುವರೆಗೂ 40 ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದರು.