ಮನೆ ಕ್ರೀಡೆ ಮೂರನೇ ಟೆಸ್ಟ್ ಪಂದ್ಯ: ಭಾರತದ ವಿರುದ್ಧ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ

ಮೂರನೇ ಟೆಸ್ಟ್ ಪಂದ್ಯ: ಭಾರತದ ವಿರುದ್ಧ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ

0

ಇಂದೋರ್: ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ತಿರುಗೇಟು ನೀಡಿರುವ ಆಸ್ಟ್ರೇಲಿಯಾ, ಅಂತರವನ್ನು 2-1ಕ್ಕೆ ತಗ್ಗಿಸಿದೆ.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲಿಗೆ ಗುರಿಯಾಗಿತ್ತು. ಅಲ್ಲದೆ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ನಾಯಕ ಸ್ಥಾನ ವಹಿಸಿರುವ ಸ್ಟೀವ್ ಸ್ಮಿತ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಮತ್ತೊಂದೆಡೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದತ್ತ ಕಣ್ಣಾಯಿಸಿರುವ ಟೀಮ್ ಇಂಡಿಯಾಗೆ ಹಿನ್ನಡೆಯಾಗಿದೆ.

ಆಸೀಸ್ ಆಟಗಾರರಿಗೆ ಗೆಲುವಿನ ಸಂಭ್ರಮ…

ಸ್ಪಿನ್ ಸ್ನೇಹಿ ಪಿಚ್‌ ನಲ್ಲಿ ಇತ್ತಂಡಗಳ ಬ್ಯಾಟರ್‌ ಗಳು ಪರದಾಡಿದರು. ಆದರೆ ಆಸೀಸ್ ಆಟಗಾರರು ಪಂದ್ಯದ ಎಲ್ಲ ಹಂತದಲ್ಲೂ ಮೇಲುಗೈ ಸಾಧಿಸಿದರು. ಮೂರನೇ ದಿನದಲ್ಲಿ ಗೆಲುವಿಗಾಗಿ 76 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ದಿನದ ಆರಂಭದಲ್ಲೇ ಉಸ್ಮಾನ್ ಖ್ವಾಜಾ (0) ವಿಕೆಟ್ ಅನ್ನು ಆರ್. ಅಶ್ವಿನ್ ಉರುಳಿಸಿದರು.

ಆದರೆ ದ್ವಿತೀಯ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದ ಟ್ರಾವಿಸ್ ಹೆಡ್ (49*) ಹಾಗೂ ಮಾರ್ನಸ್ ಲಾಬುಷೇನ್ (28*) ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಮ್ಯಾಥ್ಯೂ ಕುನೇಮನ್ ದಾಳಿಗೆ ಸಿಲುಕಿದ್ದ ಭಾರತ, ಮೊದಲ ಇನಿಂಗ್ಸ್‌ನಲ್ಲಿ 109 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ 197 ರನ್ ಪೇರಿಸಿದ್ದ ಆಸ್ಟ್ರೇಲಿಯಾ 88 ರನ್‌ ಗಳ ಮುನ್ನಡೆ ಗಳಿಸಿತ್ತು.

ದ್ವಿತೀಯ ಇನಿಂಗ್ಸ್‌ನಲ್ಲಿ ನೇಥನ್ ಲಯನ್ ದಾಳಿಗೆ ತತ್ತರಿಸಿದ ಭಾರತ 163 ರನ್‌ಗಳಿಗೆ ಆಲೌಟ್ ಆಗಿತ್ತು. ಲಯನ್ ಎಂಟು ವಿಕೆಟ್ ಕಿತ್ತು ಮಿಂಚಿದರು. ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 9ರಿಂದ 13ರವರೆಗೆ ಅಹಮದಾಬಾದ್‌ ನಲ್ಲಿ ನಡೆಯಲಿದೆ.