ಬೆಂಗಳೂರು: ಈ ಬಜೆಟ್ ಬಿಸಿಲು ಕುದುರೆಯಿದ್ದಂತೆ. ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರ ಡಬಲ್ ಇಂಜಿನ್ ಕೆಟ್ಟು ನಿಂತು ಹೊಗೆ ಬರುತ್ತಿದೆ. ಬೊಮ್ಮಾಯಿ ಅವರು ತಾವೂ ಒಂದು ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿಕೊಳ್ಳಲು ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ. ಅದನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ರಾಮನಗರದಲ್ಲಿ ರಾಮಮಂದಿರ ಕಟ್ಟುವುದಾಗಿ ತಿಳಿಸಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ರಾಮನಗರದಲ್ಲಿ ಮೊದಲು ಅವರ ಪಕ್ಷದ ಕಚೇರಿ ಕಟ್ಟಲು ಹೇಳಿ ಎಂದು ತಿರುಗೇಟು ನೀಡಿದರು.