ಸೀಮಿತ ವ್ಯಾಪ್ತಿ- ಪ್ರೇಕ್ಷಕರ ಮೂಲಕವೇ ಕೋಸ್ಟಲ್ ವುಡ್ ನಲ್ಲಿ ಕಮಾಲ್ ಮೂಡುತ್ತಿರುವ ಮಧ್ಯೆಯೇ ಇಲ್ಲಿನ ಕಥೆ, ನಿರ್ದೇಶಕರು, ನಟರು ಸ್ಯಾಂಡಲ್ವುಡ್ ಸಹಿತ ಇತರ ಆಯಾಮ ದಲ್ಲಿಯೂ ತೊಡಗಿಸಿ ಕೊಂಡಿರುವುದು ಈ ತುಳುವ ಮಣ್ಣಿನ ವಿಶೇಷ.
ತುಳುವಲ್ಲಿ ಸಿನೆಮಾ ಮಾಡಿದವರು ಕನ್ನಡ ಮಾಡುತ್ತಿದ್ದಾರೆ; ಅಥವಾ ತುಳುವರೇ ಕನ್ನಡ ಸಿನೆಮಾದಲ್ಲಿ ಕಮಾಲ್ ತೋರಿಸುತ್ತಿದ್ದಾರೆ; ಇತರ ಭಾಗದಿಂದ ಬಂದು ತುಳುವ ನೆಲೆಯಲ್ಲಿ ಕಥೆ ಹುಡುಕುತ್ತಿದ್ದಾರೆ ಅಥವಾ ತುಳುವಿನ ಸಾಂಸ್ಕೃತಿಕ ಸೊಗಡು ಕನ್ನಡದಲ್ಲಿ ಮೋಡಿ ಮಾಡುತ್ತಿದೆ… ಹೀಗೆ ನಾನಾ ಕೋನದಲ್ಲಿ ಕೋಸ್ಟಲ್ವುಡ್ ವಿಸ್ತಾರ ರೂಪಕ್ಕೆ ಚಾಚಿಕೊಂಡಿದೆ. ಕರಾವಳಿಯನ್ನೇ ಆಧಾರವಾಗಿಸಿ ತೆರೆಕಂಡ ಸಾಕಷ್ಟು ಸಿನೆಮಾಗಳು ಈಗಾಗಲೇ ಹೆಸರು ಮಾಡಿವೆ. ಮೊನ್ನೆ ಮೊನ್ನೆ ಬಂದ ಪುರುಷೋತ್ತಮನ ಪ್ರಸಂಗ, ಆರಾಟದವರೆಗೆ ಕರಾವಳಿ ಸಿನೆಮಾ ತನ್ನ ಗಡಿ ಮೀರಿ ನಿಂತಿದೆ. ಇಂತಹ ಸಿನೆಮಾಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಕರ್ನಾಟಕ- ಕೇರಳ ಗಡಿ ಭಾಗದಲ್ಲಿರುವ ಒಂದು ಸಣ್ಣ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಯುವ ಕೆಲವು ವಿದ್ಯಮಾನಗಳಿಂದ ಕೂಡಿದ “ಇದು ಎಂಥಾ ಲೋಕವಯ್ಯಾ’ ಸಿನೆಮಾ ಕರಾವಳಿಯ ಬೆಸುಗೆಯೊಂದಿಗೆ ಆ.9ಕ್ಕೆ ಬಿಡುಗಡೆಯಾಗಲಿದೆ. ರವಿವಾರ-ಸೋಮವಾರದ ದಿನ ಕುತೂಹಲವೇ ಈ ಸಿನೆಮಾದ ವಿಶೇಷತೆ.
ಪ್ರಾದೇಶಿಕ ಪ್ರತಿಭೆಗಳ ಅಭಿನಯದೊಂದಿಗೆ ನಿರ್ದೇಶಕ ಸಿತೇಶ್ ಸಿ. ಗೋವಿಂದ್ ನಿರ್ದೇಶನದ ಸಿನೆಮಾವನ್ನು ಖ್ಯಾತ ಮಲಯಾಳ ನಿರ್ದೇಶಕ ಜಿಯೋ ಬೇಬಿ ಅರ್ಪಿಸುತ್ತಿರುವುದು ವಿಶೇಷ. ಕನ್ನಡಕ್ಕೆ ಅವರ ಮೊದಲ ಪ್ರವೇಶ. ಕನ್ನಡ, ಮಲಯಾಳ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆ ಈ ಸಿನೆಮಾದಲ್ಲಿ ಮಿಳಿತ.
ಈ ಮಧ್ಯೆ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡ ಕರಾವಳಿ ಮೂಲದ ಮತ್ತೊಂದು ಸಿನೆಮಾ ಸಾಂಕೇತ್ ಕೂಡ ಹವಾ ಸೃಷ್ಟಿಸಿದೆ. ವ್ಯಕ್ತಿಗಳಲ್ಲಿ ಎದುರಾಗುವ ಸಾಮಾಜಿಕ, ಮಾನಸಿಕ ಒತ್ತಡವನ್ನು ಹೇಗೆ ಎದುರಿಸಲಾಗುತ್ತದೆ ಹಾಗೂ ಒಬ್ಬ ವ್ಯಕ್ತಿ ಅದಕ್ಕೆ ಹೇಗೆ ಭಿನ್ನವಾ ಗಿರುತ್ತಾನೆ ಎಂಬುದನ್ನು ವಿಭಿನ್ನ ಶೈಲಿಯಲ್ಲಿ ತೆರೆಗೆ ಪರಿಚಯಿಸಲಾಗಿದೆ. ಜೋತ್ಸಾ$° ಕೆ. ರಾಜ್ ಅವರ ಚೊಚ್ಚಲ ಪ್ರಯತ್ನದಲ್ಲಿ ಕರಾವಳಿಯ ಸೊಗಡು ತುಂಬಿಕೊಂಡಿದೆ.
ತುಳುವಿನಲ್ಲಿ ಒಳ್ಳೆ ಸಿನೆಮಾ ಮಾಡುವ ಕಾರಣದಿಂದ ಹಾಗೂ ಕರಾವಳಿ ಭಾಗದ ಪ್ರಾದೇಶಿಕ ಚೆಲುವು, ಕಥೆ, ಭಾಷೆ ಸಮ್ಮಿಳಿತವಾಗಿ ಸಿನೆಮಾ ಮಾಡಿದರೆ ಅಂಥ ಚಿತ್ರಗಳು ಕರಾವಳಿ ಗಡಿ ದಾಟಿಯೂ ಸದ್ದು ಮಾಡಿವೆ. ಉಳಿದವರು ಕಂಡಂತೆ ಮೂಲಕ ರಕ್ಷಿತ್ ಶೆಟ್ಟಿ, ಒಂದು ಮೊಟ್ಟೆಯ ಕಥೆಯ ಮೂಲಕ ರಾಜ್ ಬಿ.ಶೆಟ್ಟಿ, ಸರಕಾರಿ ಶಾಲೆ ಕಾಸರಗೋಡು ಮೂಲಕ ರಿಷಭ್ ಶೆಟ್ಟಿ ಸಹಿತ ಕರಾವಳಿ ಸನ್ನಿವೇಶವನ್ನು ಕರುನಾಡಿಗೆ ವಿಸ್ತರಿಸಿರುವುದು ಪ್ರಾರಂಭಿಕ ಹೆಜ್ಜೆಗಳು. ಬಳಿಕ ಅವರದ್ದೇ ಬೇರೆ ಸಿನೆಮಾ ಹಾಗೂ ಬೇರೆಯವರ ಸಿನೆಮಾಗಳು ಕೋಸ್ಟಲ್ ನೆಲೆಯಿಂದಲೇ ಸೌಂಡ್ ಮಾಡಿವೆ.