ಬೆಂಗಳೂರು: ಸರ್ಕಾರ ಗಾಳಿಯೊಂದನ್ನ ಬಿಟ್ಟು ಎಲ್ಲಾ ಬೆಲೆ ಏರಿಕೆ ಮಾಡಿದೆ. ಸಾಮಾನ್ಯ ಜನ, ರೈತರನ್ನ ಈ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಕಾಂಗ್ರೆಸ್‌ಗೆ ಜನ ಆಶೀರ್ವಾದ ಮಾಡಿದ್ದಾರೆ. ಆದರೆ ಈ ಸರ್ಕಾರ ಮತದಾರರಿಗೆ ವರದಾನ ಆಗೋ ಬದಲು ಶಾಪಗ್ರಸ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಲೆ ಏರಿಕೆ ಅಂದರೆ ಎಲ್ಲಾ ಏರಿಕೆ ಮಾಡಿದೆ. ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಹಾಲಿನ ದರ ಮೂರು ಬಾರಿ ಏರಿಕೆ ಮಾಡಿದ್ದಾರೆ. ಈಗ ಮತ್ತೆ ಏರಿಕೆ ಆಗಿದೆ. ಸರ್ಕಾರಿ ಆಸ್ಪತ್ರೆ ಚಿಕಿತ್ಸೆ ವೆಚ್ಚವನ್ನು ಜಾಸ್ತಿ ಮಾಡಿದ್ದಾರೆ. ಹೊರ ರೋಗಗಳ ಶುಲ್ಕ, ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ ಏರಿಕೆಯಾಗಿದೆ. ಲ್ಯಾಬ್ ಶುಲ್ಕ ಜಾಸ್ತಿ ಆಗಿದೆ. ಬಡವರಿಗೂ ಬರೆ ಎಳೆಯೋ ಕೆಲಸ ಈ ಸರ್ಕಾರ ಮಾಡಿದೆ. ನೋಂದಣಿ-ಮುದ್ರಾಂಕ ಶುಲ್ಕ ಜಾಸ್ತಿ ಆಗಿದೆ. ಪ್ರೊಫೆಷನಲ್ ಟ್ಯಾಕ್ಸ್ ಜಾಸ್ತಿ ಮಾಡಿದ್ದಾರೆ. ಬಸ್ ಟಿಕೆಟ್ ದರ ಏರಿಕೆ ಆಗಿದೆ. ಬೀಜಗಳ ಬೆಲೆ ಜಾಸ್ತಿ ಮಾಡಿದ್ದಾರೆ. ನೀರಿನ ದರ ಜಾಸ್ತಿ ಮಾಡಿದ್ದಾರೆ. ಈ ಸರ್ಕಾರ ಜನರಿಗೆ, ಮತದಾರರಿಗೆ ಶಾಪ ಕೊಡುವ ಕೆಲಸ ಮಾಡಿದೆ ಎಂದು ಕಿಡಿ ಕಾರಿದರು.
ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ರಾಜ್ಯ ಸರ್ಕಾರ ಬಡವರಿಗೆ ಬರೆ ಎಳೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಬೆಲೆ ಏರಿಕೆ ನಿರ್ಧಾರ ವಾಪಸ್ ಪಡೆಯಲು ಹೋರಾಟ ನಡೆಸಲಿದ್ದೇವೆ. ಏ.2ರಂದು ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ಅಹೋರಾತ್ರಿ ಧರಣಿ ಪ್ರಾರಂಭವಾಗಲಿದೆ. ಹಾಲಿ ಮಾಜಿ ಶಾಸಕರು, ಪರಿಷತ್ ಸದಸ್ಯರು, ಪದಾಧಿಕಾರಿಗಳು ಭಾಗಿಯಾಗುತ್ತಾರೆ. ಏ.2ರಂದು ಅಹೋರಾತ್ರಿ ಧರಣಿ ಪ್ರಾರಂಭವಾಗಲಿದೆ. ಏ.5ರಂದು ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಎಲ್ಲಾ ಜಿಲ್ಲೆಗಳಲ್ಲಿ ರಸ್ತೆಗೆ ಇಳಿದು ಹೋರಾಟ ಮಾಡಲಿದೆ ಎಂದು ಹೇಳಿದರು.