ಶಿವಮೊಗ್ಗ: ಸಿ.ಟಿ ರವಿ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ಇದೇನು ಮೊದಲಲ್ಲ. ಈ ಹಿಂದೆ ಕೂಡ ದತ್ತಪೀಠದ ಹೋರಾಟದ ವೇಳೆ ಶಿವಮೊಗ್ಗಕ್ಕೆ ಬಂದಾಗ ಕಾಂಗ್ರೆಸ್ ನವರು ಹಲ್ಲೆಗೆ ಮುಂದಾಗಿದ್ದರು. ಕಾಂಗ್ರೆಸ್ ಹೊಸ ಸಂಪ್ರದಾಯವನ್ನು ಬಿತ್ತುವಂತಹ ಕೆಲಸ ಮಾಡುತ್ತಿದೆ. ಸದನದ ಒಳಗಡೆ ನಿರ್ಣಯ ಆಗಬೇಕಿರುವ ವಿಷಯವನ್ನು ರಸ್ತೆಗೆ ತಂದಿದ್ದಾರೆ ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿಗೂ ಈ ರೀತಿ ನಡೆಸಿಕೊಳ್ಳುವುದಿಲ್ಲ. ಮೂರು ಮೂರು ಠಾಣೆಗಳಿಗೆ ಅವರನ್ನು ಅಲೆದಾಡಿಸಿದ್ದಾರೆ. ಸುವರ್ಣ ಸೌಧದ ಒಳಗಡೆ ಬಂದು ಈ ರೀತಿಯ ಆಟ ಆಡುತ್ತಾರೆ. ಪೊಲೀಸನವರು ಏನು ಸತ್ತು ಹೋಗಿದ್ದಾರಾ? ಇದು ಸರ್ಕಾರದ ವಿಫಲತೆ ಅಲ್ಲವೇ? ಸರ್ಕಾರದ ಕುಮ್ಮಕ್ಕು ಇದಾಗಿದೆ. ರಕ್ಷಣಾ ವ್ಯವಸ್ಥೆ ಎಲ್ಲಿದೆ ಎಂದರು.
ಸಿ.ಟಿ.ರವಿ ಅವರ ಬಂಧನ ಅತ್ಯಂತ ರಾಜಕೀಯ ಪ್ರೇರಿತ ಅನಿಸುತ್ತದೆ. ನಾನು ಘಟನೆ ನಡೆದ ಸ್ಥಳದಲ್ಲೇ ಇದ್ದೆ. ಉದ್ದೇಶ ಪೂರ್ವಕವಾಗಿ ಅವರ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ. ಹೆಬ್ಬಾಳ್ಕರ್ ತಮ್ಮನ ಪಿ.ಎ ರೌದ್ರಾವತಾರ ನೋಡಿದರೆ ಹಲ್ಲೆ ಮಾಡಲೇ ಬಂದಿದ್ದಾರೆ ಅನಿಸುತ್ತದೆ. ಕೊಲೆ ಮಾಡಲು ಬಂದಿದ್ದಾರೆ ಅನಿಸುತ್ತದೆ ಎಂದರು.
ಸಿ.ಟಿ.ರವಿ ರಾಜ್ಯದ ನಾಯಕರು ಹಾಗೂ ಪ್ರಖರ ಹಿಂದುತ್ವವಾದಿ. ಅವರನ್ನು ಸದೆಬಡಿಯುವ ಪ್ರಯತ್ನ ನಡೆದಿದೆ. ನಾನು ಈ ಪದ ಕೇಳಿಲ್ಲವೆಂದು ಸಭಾಪತಿಗಳು ಹೇಳಿದ್ದಾರೆ. ನಾವು 40 ವರ್ಷಗಳಿಂದ ಸಿ.ಟಿ ರವಿಯವರನ್ನು ನೋಡಿಕೊಂಡು ಬಂದಿದ್ದೇವೆ. ಎಲ್ಲೋ ಒಂದು ಕಡೆ ಇದನ್ನು ರಾಜಕೀಯಗೊಳಿಸಲು ಹೊರಟಿದ್ದಾರೆ. ಲಕ್ಷಾಂತರ ಜನ ಕಾರ್ಯಕರ್ತೆಯರನ್ನು ಇರುವ ಪಕ್ಷ ಬಿಜೆಪಿ. ಸಿ.ಟಿ ರವಿ ಅವರು ಅಸಭ್ಯವಾಗಿ ನಡೆದುಕೊಳ್ಳುವ ಮನುಷ್ಯ ಅಲ್ಲ ಎಂದರು.
ಕೊಪ್ಪಳ: ನಾವು ಎಲ್ಲರೂ ಸಿ.ಟಿ ರವಿ ಹತ್ತೀರದಲ್ಲೇ ಇದ್ದೆವು. ಆದರೆ ನಮಗೆ ಕೇಳಿಸದೆ ಇರುವುದು ಅವರಿಗೆ ಹೇಗೆ ಕೇಳಿಸಿತು? ಸಿ.ಟಿ ರವಿ ಆ ರೀತಿ ಕೂಗಿಲ್ಲ, ನಾವು ಕೇಳಿಲ್ಲ ಎಂದು ಕೊಪ್ಪಳ ನಗರದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.
ಓರ್ವ ಮಹಿಳೆ ಗೆ ಆ ಶಬ್ದ ಬಳಸಿದರೆ ಯಾರು ಸಹಿಸುತ್ತಿರಲಿಲ್ಲ. ಅವರ ಆಪಾದನೆ ಸತ್ಯಕ್ಕೆ ದೂರವಾದದ್ದು. ಸಿ.ಟಿ ರವಿ ಅವರು ಸುಸಂಸ್ಕೃತ ವ್ಯಕ್ತಿ, ಅಮ್ಮಾ ನಮಸ್ಕಾರ, ಅಕ್ಕಾ ನಮಸ್ಕಾರ ಎಂದು ಹೇಳುವ ವ್ಯಕ್ತಿ. ಅಂತಹ ವ್ಯಕ್ತಿ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದರು.