ಮನೆ ರಾಜ್ಯ ಈ ಬಂಡೆ ಸದಾ ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತದೆ: ಡಿ.ಕೆ. ಶಿವಕುಮಾರ್

ಈ ಬಂಡೆ ಸದಾ ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತದೆ: ಡಿ.ಕೆ. ಶಿವಕುಮಾರ್

0

ಹಾಸನ: ಈ ಬಂಡೆ ಸದಾ ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತದೆ. ಇಂದು, ನಾಳೆ, ಎಂದೆಂದಿಗೂ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರೊಂದಿಗೆ ಇರುತ್ತಾರೆ. ನೀವು ಚಿಂತೆ ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Join Our Whatsapp Group

ಈ ಜಿಲ್ಲೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶಗೊಂಡು, ನೊಂದ ತಾಯಂದಿರಿಗೆ ಧೈರ್ಯ ತುಂಬಲು ಹಾಸನ ಜಿಲ್ಲೆಯ ಜನರು ಸಂಸದ ಶ್ರೇಯಸ್‌ ಪಟೇಲ್ ಅವರಿಗೆ ಆಶೀರ್ವಾದ ಮಾಡಿದ್ದಾರೆ ಎಂದರು.

ಐದು ಗ್ಯಾರಂಟಿಗಳು ಪರ್ಮನೆಂಟ್, 2028ಕ್ಕೆ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೂ ನಿಶ್ಚಿತ. ಬಿಜೆಪಿ–ಜೆಡಿಎಸ್‌ನವರ ಟೀಕೆಗಳಿಗೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಮೂಲಕ ರಾಜ್ಯದ ಜನರು ಉತ್ತರ ನೀಡಿದ್ದಾರೆ. ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಸಮಾಜಕ್ಕೆ ಶಕ್ತಿ ಕೊಟ್ಟಿದ್ದೇವೆ ಎಂದರು.

ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಕೊಡಗು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಮುಂದೆ ಹಾಸನ ಜಿಲ್ಲೆಯಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಹಾಸನದ ಜಿಲ್ಲೆಯನ್ನು ನೋಡಿದರೆ ಸಂಕಟವಾಗುತ್ತದೆ. ತಾಯಂದಿರ ಸ್ವಾಭಿಮಾನ ಉಳಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಿದ್ದೇವೆ ಎಂದರು.

ದೇವರಾಜ ಅರಸು ಕಾಲದಲ್ಲಿ ಊಳುವವನೇ ಭೂಮಿಯ ಒಡೆಯ ಯೋಜನೆ ತರಲಾಗಿತ್ತು. ಇಂದಿರಾ ಗಾಂಧಿ ಅವರ ಕಾಲದಲ್ಲಿ 20 ಅಂಶಗಳ ಕಾರ್ಯಕ್ರಮ ತರಲಾಗಿತ್ತು. ಮನಮೋಹನ್‌ ಸಿಂಗ್‌ ಅವರ ಕಾಲದಲ್ಲಿ ತಂತ್ರಜ್ಞಾನದ ಕ್ರಾಂತಿ, ಆಹಾರ ಭದ್ರತೆ ಕಾಯ್ದೆ, ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಲಾಯಿತು. ಇವು ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಎಂದು ಹೇಳಿದರು.

ಎಸ್‌.ಎಂ. ಕೃಷ್ಣ ಬಿಸಿಯೂಟ ಯೋಜನೆ ರೂಪಿಸಿದರು.  ಐಟಿ–ಬಿಟಿ ಸಂಸ್ಥೆಗಳನ್ನು ಬೆಂಗಳೂರಿಗೆ ತಂದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ದಿನವೇ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದರು. ಕಾಂಗ್ರೆಸ್‌ ಪಕ್ಷದ ಬೆಂಬಲದಿಂದಲೇ ದೇವೇಗೌಡರನ್ನು ಪ್ರಧಾನಿ ಮಾಡಿದೆವು. ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ಚನ್ನಪಟ್ಟಣದ ಚುನಾವಣೆಯಲ್ಲಿ ಆರೋಪ ಮಾಡಿದ ದೇವೇಗೌಡರು ಮಾಡಿದ ಸಾಧನೆ ಏನು ಎಂಬುದನ್ನು ಚರ್ಚಿಸಲು ಇಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಾವು ಜನರ ಭಾವನೆ, ಧರ್ಮಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಅಧಿಕಾರ ಶಾಶ್ವತವಲ್ಲ, ಕಾಂಗ್ರೆಸ್ ಸಾಧನೆಗಳು ಅಜರಾಮರ. ಗ್ಯಾರಂಟಿಯ ಗೆಲುವಿನ, ನಂಬಿಕೆಯ ಸಮಾವೇಶ ಎಂದರು.

ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರ ಕುತಂತ್ರಗಳು ನಡೆದಿಲ್ಲ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮೈಸೂರು ಕರ್ನಾಟಕದಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ 6 ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೆಸೆಯುವುದಾಗಿ ದೇವೇಗೌಡರು, ಕುಮಾರಸ್ವಾಮಿ ಹೇಳಿದರು. ಆದರೆ, ರಾಜ್ಯ ಸರ್ಕಾರ ಆಲೂಗೆಡ್ಡೆ ಅಥವಾ ಕಡಲೆ ಗಿಡವಲ್ಲ. 137 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ನುಡಿದರು.

;ಕೆಎಂಎಫ್‌ ಅನ್ನು ಅಮೂಲ್‌ ಜೊತೆಗೆ ವಿಲೀನ ಮಾಡಲು ಹೊರಟಿದ್ದರು. ಈಗ ನಂದಿನಿ ಹಾಲು ದೆಹಲಿಗೆ ಹೋಗುತ್ತಿದೆ. ನಂದಿನಿ ತುಪ್ಪ ತಿರುಪತಿ ತಿಮ್ಮಪ್ಪ ಪ್ರಸಾದ ತಯಾರಿಸಲು ಹೋಗುತ್ತದೆ. ನಾವು ರಾಜಕಾರಣ ಮಾಡಲು ಬಂದಿಲ್ಲ. ನಿಮ್ಮ ಬದುಕಿನಲ್ಲಿ ಒಂದಾಗಲು ನಾವು ಬಂದಿದ್ದೇವೆ ಎಂದರು.

ನಮ್ಮಲ್ಲಿ ಒಗ್ಗಟ್ಟಿದೆ, ನಿಮ್ಮಲ್ಲಿ ಬಿಕ್ಕಟ್ಟಿದೆ. ನಾವು ವಚನಭ್ರಷ್ಟರಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ. ಲೋಕಸಭೆ ಚುನಾವಣೆಯಲ್ಲೂ ಇಂಡಿಯಾ ಒಕ್ಕೂಟಕ್ಕೆ 244 ಸ್ಥಾನ ನೀಡುವ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು.

ಡಾ.ಅಂಬೇಡ್ಕರ್‌ ಅವರು ಕೊಟ್ಟ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‌ ಬದ್ಧವಾಗಿದೆ. ಹಾಸನದಿಂದಲೇ ಸ್ವಾಭಿಮಾನದ ಸಮಾವೇಶ ಆರಂಭಿಸಲಾಗಿದೆ. ಬಡವರಿಗಾಗಿ ಪ್ರಾಮಾಣಿಕತೆಯಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಂಪುಟದ ಎಲ್ಲ ಸಚಿವರು, ಶಾಸಕರು ಒಟ್ಟಾಗಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿಮ್ಮ ಋಣವನ್ನು ತೀರಿಸುವ ಕೆಲಸ ಮಾಡುತ್ತೇವೆ ಎಂದ ಅವರು, ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.