ಮನೆ ರಾಜಕೀಯ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ: ಬಿ.ಎಸ್.ಯಡಿಯೂರಪ್ಪ

ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ: ಬಿ.ಎಸ್.ಯಡಿಯೂರಪ್ಪ

0

ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ರಚಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ವಿಜಯ ಸಂಕಲ್ಪ ಯಾತ್ರೆ ಮಾಡಿದ್ದೇವೆ. ವಿಜಯ ಸಂಕಲ್ಪ ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೂ ಅವರವರ ಜಿಲ್ಲೆಗಳಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ಸಂಸದರ ಸಭೆ ಕರೆಯಲಾಗುತ್ತದೆ. ಸಿಎಂ ಮೀಸಲಾತಿ ಹೆಚ್ಚಳ ಮಾಡಿರುವುದು ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸವಾಗಿದೆ.

ನಾನು ಜನರಿಗಾಗಿ ಹಲವು ಕಾರ್ಯಕ್ರಮ ಮಾಡಿದ್ದೇವೆ. ಸದ್ಯದಲ್ಲೇ ಅಭ್ಯರ್ಥಿಗಳನ್ನು ಹೈಕಮಾಂಡ್ ತೀರ್ಮಾನ ಮಾಡಲಿದ್ದಾರೆ. ನಂತರ ನಾನು, ಎಲ್ಲಾ ಮುಖಂಡರು, ಸಂಸದರು ಪ್ರವಾಸ ಮಾಡುತ್ತೇವೆ. ಹಿಂದೆ ನಾನು 25 ಸಂಸದರು ಗೆಲ್ಲುತ್ತೇವೆ ಎಂದು ಹೇಳಿದ್ದು ಸುಳ್ಳಾಗಲಿಲ್ಲ. ಶೀಘ್ರದಲ್ಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಆ ಬಗ್ಗೆ ಚರ್ಚೆ ನಡೆಯುತ್ತಿದೆ.  ಸಿದ್ದರಾಮಯ್ಯ ಗೆಲುವು ಸುಲಭವಿದೆ ಎಂದು ನನಗೆ ಅನಿಸುತ್ತಿಲ್ಲ. ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಹಾಕುತ್ತೇವೆ. ಟಿಕೆಟ್ ಬಗ್ಗೆ ತೀರ್ಮಾನ ಮಾಡೋದು ನಾನಲ್ಲ, ವರಿಷ್ಠರು. ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣುತ್ತಿದ್ದಾರೆಂದು ವ್ಯಂಗ್ಯವಾಡಿದರು.